ADVERTISEMENT

ಲಿಂಗಸುಗೂರು| ಕರ್ತವ್ಯ ಲೋಪ: ಸಾರಿಗೆ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 6:19 IST
Last Updated 4 ಜನವರಿ 2026, 6:19 IST
ಕರವೇ ಪದಾಧಿಕಾರಿಗಳು ಲಿಂಗಸುಗೂರು ಸಾರಿಗೆ ಘಟಕದ ವ್ಯವಸ್ಥಾಪಕ ಪ್ರಕಾಶ ದೊಡ್ಡಮನಿ ಅವರಿಗೆ ಮನವಿ ಸಲ್ಲಿಸಿದರು
ಕರವೇ ಪದಾಧಿಕಾರಿಗಳು ಲಿಂಗಸುಗೂರು ಸಾರಿಗೆ ಘಟಕದ ವ್ಯವಸ್ಥಾಪಕ ಪ್ರಕಾಶ ದೊಡ್ಡಮನಿ ಅವರಿಗೆ ಮನವಿ ಸಲ್ಲಿಸಿದರು   

ಲಿಂಗಸುಗೂರು: ‘ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸುವ ಕಲ್ಯಾಣ ಸಾರಿಗೆ ಘಟಕದ ಕೆಲ ಸಂಚಾರಿ ನಿಯಂತ್ರಕರು, ಚಾಲಕ, ನಿರ್ವಾಹಕರ ವಿರುದ್ಧ ಕ್ರಮ ಜರಗಿಸಬೇಕು’ ಎಂದು ಆಗ್ರಹಿಸಿ ಕರವೇ(ಎಚ್. ಶಿವರಾಮೇಗೌಡ) ತಾಲ್ಲೂಕು ಘಟಕದ ಪದಾಧಿಕಾರಿಗಳು ಸಾರಿಗೆ ಘಟಕದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ಡಿ.29ರಂದು ಲಿಂಗಸುಗೂರುನಿಂದ ತೊರಲಬೆಂಚಿ ಮಾರ್ಗದ ಬಸ್ (ಕೆಎ 36 ಎಫ್ 1219) ಸಂಜೆ6 ಗಂಟೆಗೆ ತೊರಲಬೆಂಚಿ ಗ್ರಾಮದ ಸುಮಾರು 10ಕ್ಕೂ ಹೆಚ್ಚು ಶಾಲಾ ಕಾಲೇಜು ವಿದ್ಯಾರ್ಥಿಗಳು, ಮಹಿಳಾ ಪ್ರಯಾಣಿಕರನ್ನು ಬಸ್ ಚಾಲಕ ಮತ್ತು ನಿರ್ವಾಹಕ ‘ಬಸ್ ಗೇರ್ ಸಮಸ್ಯೆಯಿದೆ’ ಎಂದು ಸುಳ್ಳು ನೆಪ ಹೇಳಿ ಈಚನಾಳ ಗ್ರಾಮದಲ್ಲಿ ಇಳಿಸಿ ಬಸ್‌ನಲ್ಲಿ ಹತ್ತಿಸಿಕೊಳ್ಳದೆ ದುರಹಂಕಾರದಿಂದ ವರ್ತಿಸುತ್ತಿದ್ದ ಘಟನೆ ನಡೆದಿದೆ’ ಎಂದು ಅವರು ಮಾಹಿತಿ ನೀಡಿದರು.

ಸುಳ್ಳು ಹೇಳಿ ಸಾರ್ವಜನಿಕರ ಸೇವೆಗೆ ತೊಂದರೆ ನೀಡಿದ, ಪ್ರಯಾಣಿಕರೊಂದಿಗೆ ಅಸಭ್ಯ ವರ್ತನೆ ತೋರಿದ ಚಾಲಕ ಮತ್ತು ನಿರ್ವಾಹಕ, ಹಾಗೂ ಡಿ.27 ರಂದು ಲಿಂಗಸುಗೂರು ಬಸ್ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂಚಾರ ನಿಯಂತ್ರಕ ಲಕ್ಷ್ಮಣ ನಾಗರಾಳ ಬಗ್ಗೆ ಮಾಹಿತಿ ಕೇಳಲು ಕೇಳಿದ ಪ್ರಯಾಣಿಕರಿಗೆ ತಪ್ಪು ಮಾಹಿತಿ ನೀಡದಲ್ಲದೆ ಗುಂಡಾ ಪ್ರವೃತ್ತಿ ತೋರಿದ್ದು, ಈ ಕೂಡಲೇ ಮೂರು ಜನ ಸಿಬ್ಬಂದಿಯನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

ತಾಲ್ಲೂಕು ಘಟಕದ ಅಧ್ಯಕ್ಷ ಮಾದೇಶ ಸರ್ಜಾಪುರ, ಪ್ರಧಾನ ಕಾರ್ಯದರ್ಶಿ ಶರಣಬಸವ ಈಚನಾಳ, ಮುತ್ತಣ್ಣ ಗುಡಿಹಾಳ, ಮಹಾಂತೇಶ ಹೂಗಾರ, ಜಗನ್ನಾಥ ಜಾಧವ್, ಈಶ್ವರ ವಿಶ್ವಕರ್ಮ, ಪಂಪಣ್ಣ ಜಾಲಿಬೆಂಚಿ, ರಾಘವೇಂದ್ರ ನಾಯಕ, ಅಮರೇಶ ಹುನಕುಂಟಿ, ಅಮರೇಗೌಡ, ದೇವಣ್ಣ ಹಾಗೂ ಇನ್ನಿತರಿದ್ದರು.