ADVERTISEMENT

ರಾಯಚೂರು | ತುಂಗಭದ್ರಾ ಕ್ರಸ್ಟರ್ ಗೇಟ್ ಅಳವಡಿಸಲು ಸೆ.8ರಂದು ಬೃಹತ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 6:01 IST
Last Updated 5 ಸೆಪ್ಟೆಂಬರ್ 2025, 6:01 IST
ನಾರಾಯಣಪುರದ ಬಸವಸಾಗರ ಜಲಾಶಯದ 25 ಕ್ರಸ್ಟ್‌ ಗೇಟ್‌ಗಳಿಂದ 1.10 ಲಕ್ಷ ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗುತ್ತಿದೆ 
ನಾರಾಯಣಪುರದ ಬಸವಸಾಗರ ಜಲಾಶಯದ 25 ಕ್ರಸ್ಟ್‌ ಗೇಟ್‌ಗಳಿಂದ 1.10 ಲಕ್ಷ ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗುತ್ತಿದೆ     

ರಾಯಚೂರು: ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಅಳವಡಿಸುವ ಕಾರ್ಯವನ್ನು ತಕ್ಷಣ ಆರಂಭಿಸಬೇಕು ಎಂದು ಒತ್ತಾಯಿಸಿಸೆ. 8 ರಂದು ಕೊಪ್ಪಳ ಜಿಲ್ಲೆಯ ಮುನಿರಾಬಾದ್ ನಲ್ಲಿ ರೈತ ಸಂಘಟನೆಯ ನೇತೃತ್ವದಲ್ಲಿ ಪಕ್ಷಾತೀತ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ ತಿಳಿಸಿದರು.

ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕಿತ್ತು ಹೋಗಿ ಅಪಾರ‌ ಪ್ರಮಾಣದ ನೀರು ನೆರೆಯ ರಾಜ್ಯಕ್ಕೆ ಹರಿದು ಹೋಗಿತ್ತು. ಈಗ ಶಿಥಿಲವಾಗಿರುವ ಗೇಟ್ ಅಳವಡಿಕೆ ಟೆಂಡರ್ ಕರೆಯಲಾಗಿದ್ದು ನಿಧಾನಗತಿಯಿಂದ ಕೆಲಸ ನಡೆಯುತ್ತಿದೆ ಎಂದು ನಗರದಲ್ಲಿ ಗುರುವಾರ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು.

ಗುತ್ತಿಗೆದಾರರಿಗೆ ಸಕಾಲಕ್ಕೆ ಹಣ ಪಾವತಿಸಿದರೆ ವೇಗವಾಗಿ ಕಾಮಗಾರಿ ಮುಗಿದು ರೈತರಿಗೆ ಅನುಕೂಲವಾಗಲಿದೆ. ನೀರಾವರಿ ಇಲಾಖೆಯ ಅಧಿಕಾರಿಗಳು ಬೇಸಿಗೆ ಬೆಳೆಗೆ ನೀರಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರ ಜಲಾಶಯದಲ್ಲಿ ತುಂಬಿರುವ ಹೂಳು ತೆಗೆಯಲು ಮುಂದಾಗುತ್ತಿಲ್ಲ. ನವಲಿ ಸಮತೋಲನ ಜಲಾಶಯವನ್ನೂ ನಿರ್ಮಾಣ ಮಾಡುತ್ತಿಲ್ಲ. ಸಿಬ್ಬಂದಿ ಕೊರತೆಯಿಂದ ನೀರು ನಿರ್ವಹಣೆ ಸಾಧ್ಯವಾಗಿಲ್ಲ. ಜುಲೈನಲ್ಲಿ ಕಾಲುವೆಗೆ ನೀರು ಹರಿಸಿದರೆ ಸೆಪ್ಟೆಂಬರ್‌ನಲ್ಲಿ ಸಿರವಾರಕ್ಕೆ ನೀರು ಬಂದಿದೆ. ಅನಧಿಕೃತ ನೀರಾವರಿ ತಡೆಯಲು ಕಾನೂನು ರೂಪಿಸಿದ್ದರೂ ಜಾರಿಗೊಳಿಸುತ್ತಿಲ್ಲ. ಅಚ್ಚುಕಟ್ಟು ವ್ಯಾಪ್ತಿ ರೈತರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ನಡೆಯಲಿರುವ ಬೃಹತ್ ಪ್ರತಿಭಟನೆಗೆ ನಾಲ್ಕು ಜಿಲ್ಲೆಗಳು ವಿವಿಧ ರಾಜಕೀಯ ಪಕ್ಷಗಳ ನಾಯಕರು, ಸಂಘ ಸಂಸ್ಥೆಗಳ, ವರ್ತಕರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ಮಾಜಿ ಶಾಸಕ ಗಂಗಾಧರ ನಾಯಕ, ಶರಣಪ್ಪಗೌಡ ಜಾಡಲದಿನ್ನಿ, ಬೂದೆಯ್ಯ ಸ್ವಾಮಿ, ವೈ.ಬಸನಗೌಡ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.