
ರಾಯಚೂರು: ‘ತುಂಗಭದ್ರಾ ಜಲಾಶಯಕ್ಕೆ ಹೊಸ ಕ್ರೆಸ್ಟ್ ಗೇಟ್‌ಗಳ ಅಳವಡಿಕೆ ಹಾಗೂ ಬೇಸಿಗೆ ಬೆಳೆಗೆ ನೀರು ಪೂರೈಕೆ ಕುರಿತು ಚರ್ಚಿಸಲು ರಾಜ್ಯ ಸರ್ಕಾರ ಒಂದು ವಾರದ ಒಳಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ರೈತ ಮುಖಂಡರ ತುರ್ತು ಸಭೆ ಕರೆಯಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಘಟಕದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಒತ್ತಾಯಿಸಿದರು.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಚೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಜಿಲ್ಲೆಗೆ ಆಗಮಿಸಿದ್ದ ಸಂದರ್ಭದಲ್ಲಿ ಜಿಲ್ಲೆಯ ನೀರಾವರಿ ಸಮಸ್ಯೆ, ತುಂಗಭದ್ರ ಕ್ರಸ್ಟ್ ಗೇಟ್ ಅಳವಡಿಕೆಯ ಕುರಿತು ಮಹತ್ವದ ವಿಚಾರಗಳನ್ನು ಚರ್ಚಿಸಲಾಗಿದೆ. ಗೇಟ್ ಅಳವಡಿಕೆ ಹಿನ್ನೆಲೆಯಲ್ಲಿ ಬೇಸಿಗೆ ಬೆಳೆಗೆ ನೀರು ನೀಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ರೈತರಿಗೆ ಮಾತ್ರವಲ್ಲದೆ ರೈಸ್ ಮಿಲ್‌ಗಳು, ಕೂಲಿಕಾರ್ಮಿಕರು ಸೇರಿದಂತೆ ಅನೇಕ ವಲಯಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಜಲಾಶಯದ ಒಳ ಹರಿವು ನಿರಂತರವಾಗಿರುವುದರಿಂದ ನೀರನ್ನು ಬಂದ್ ಮಾಡದೇ ಗೇಟ್‌ಗಳನ್ನು ಅಳವಡಿಸಬಹುದು’ ಎಂದರು.
‘ಜಿಲ್ಲೆಯಲ್ಲಿ ಮಳೆಯಿಂದಾಗಿ ಬೆಳೆ ನಷ್ಟವಾಗಿದ್ದು ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಮುಖ್ಯಮಂತ್ರಿ ವೈಮಾನಿಕ ಸಮೀಕ್ಷೆ ನಡೆಸಿದರೂ ಪರಿಹಾರ ಮಾತ್ರ ಇನ್ನೂ ತಲುಪಿಲ್ಲ. ಕೇಂದ್ರದಿಂದ ₹321 ಕೋಟಿ ಪರಿಹಾರ ಬಂದಿದೆ ಎಂದು ಹೇಳಲಾಗುತ್ತಿದ್ದು, ಅದೆಲ್ಲ ಎಲ್ಲಿ ಹೋಯಿತು’ ಎಂದು ಪ್ರಶ್ನಿಸಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಶಾಸಕ ಗಂಗಾಧರ ನಾಯಕ, ಜಾನ್ ವೆಸ್ಲಿ, ಬೂದಯ್ಯ ಸ್ವಾಮಿ, ರೈತ ಸಂಘದ ಜಿಲ್ಲಾ ಅಧ್ಯಕ್ಷ ಪ್ರಭಾಕರ್ ಪಾಟೀಲ್ ಇಂಗಳದಾಳ, ಚಂದ್ರಶೇಖರ ಗೂಗೇಬಾಳ ಉಪಸ್ಥಿತರಿದ್ದರು.
‘ನೀರು ನಿರ್ವಹಣೆ ಬಗ್ಗೆ ಚರ್ಚೆಯಾಗಲಿ’
‘ತುಂಗಭದ್ರಾ ಜಲಾಶಯಕ್ಕೆ ನಿರಂತರವಾಗಿ 27 ಸಾವಿರ ಕ್ಯೂಸೆಕ್ ನೀರು ಹರಿದುಬರುತ್ತಿದೆ. ಪ್ರಸ್ತುತ 80 ಟಿಎಂಸಿ ನೀರನ್ನು ಸಂಗ್ರಹ ಮಾಡಬಹುದಾಗಿದ್ದು ನವೆಂಬರ್‌ವರೆಗೂ ಒಳಹರಿವು ಬರುವ ಸಾಧ್ಯತೆಯಿದೆ. 15 ಟಿಎಂಸಿ ನೀರು ನವೆಂಬರ್‌ನಲ್ಲಿ 15 ಟಿಎಂಸಿ ಡಿಸೆಂಬರ್‌ನಲ್ಲಿ ಕಾಲುವೆಗೆ ಹರಿಬಿಡಬಹುದು. ನಂತರ ಜನವರಿಯಲ್ಲಿ 25 ಟಿಎಂಸಿ ನೀರು ಬೇಕಾಗುತ್ತದೆ. ನಂತರ ಫೆಬ್ರವರಿಯಲ್ಲಿ ಮೆಣಸಿನಕಾಯಿ ಬೆಳೆಗೆ ಮಾತ್ರ ನೀರು ಬೇಕಾಗುವವುದರಿಂದ 18 ಟಿಎಂಸಿ ನೀರು ಬೇಕಾಗುತ್ತದೆ. ಮಾರ್ಚ್ 30ರವರೆಗೆ ಒಟ್ಟು 88 ಟಿಎಂಸಿ ನೀರು ಬೇಕಾಗಬಹುದು. ಆದ್ದರಿಂದ ನೀರನ್ನು ನಿರ್ವಹಣೆ ಮಾಡುವ ಕುರಿತು ಚರ್ಚೆಯಾಗಬೇಕು’ ಎಂದರು. ‘ಕೇವಲ ಗೇಟ್‌ಗಳನ್ನು ಅಳವಡಿಸುವ ಕಾರಣ ನೀರು ಕೊಡಲು ಆಗುವುದಿಲ್ಲ ಎನ್ನುವುದು ಸರಿಯಲ್ಲ. ಇದಕ್ಕೆ ಯಾವ ರೈತರೂ ಒಪ್ಪುವುದಿಲ್ಲ. ಗೇಟ್ ಅಳವಡಿಕೆ ಜೊಗೆ ಎಡದಂಡೆ ನಾಲೆಯುದ್ದಕ್ಕೂ ಇರುವ ಕಿರು ಸೇತುವೆಗಳನ್ನು ಸರಿಪಡಿಸಲು ಕೂಡ ಸರ್ಕಾರ ಮುಂದಾಗಬೇಕು’ ಎಂದು ಅವರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.