ರಾಯಚೂರು: ‘ಸುಖದಿಂದ ಸಂಸಾರ ನಡೆಸಲು ಎರಡು ಮಕ್ಕಳು ಸಾಕು. ಇದರಿಂದ ಗುಣಮಟ್ಟದ ಶಿಕ್ಷಣ, ಆರೋಗ್ಯ, ಪೌಷ್ಟಿಕ ಆಹಾರ ಕೊಡಲು ಸಾಧ್ಯವಾಗುತ್ತದೆ. ಜೊತೆಗೆ ದೇಶದ ಅಭಿವೃದ್ಧಿಗೆ ಪೂರಕವಾಗುತ್ತದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು ಅಭಿಪ್ರಾಯಪಟ್ಟರು.
ನಗರದ ಡಿಎಚ್‌ಒ ಕಚೇರಿ ಆವರಣದಲ್ಲಿ ಜನಸಂಖ್ಯೆ ನಿಯಂತ್ರಣದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಹೆಚ್ಚುತ್ತಿರುವ ಜನಸಂಖ್ಯೆಯಿಂದ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ, ಅರಿವು ಮೂಡಿಸಲು ವಿಶ್ವ ಜನಸಂಖ್ಯಾ ದಿನ ಆಚರಿಸಲಾಗುತ್ತಿದೆ. ಮಹಿಳೆಯ ದೈಹಿಕ ಮತ್ತು ಮಾನಸಿಕ ಆರೋಗ್ಯ ಸ್ಥಿರತೆಯು ತಾಯ್ತನಕ್ಕೆ ಸರಿಯಾದ ವಯಸ್ಸು ಎಂಬುದು ಈ ಸಲದ ದಿನಾಚರಣೆಯ ಘೋಷ ವಾಕ್ಯವಾಗಿದೆ’ ಎಂದು ತಿಳಿಸಿದರು.
‘ದೇಶದ ಅಭಿವೃದ್ಧಿಗೆ ಜನ ಬೇಕು. ಆದರೆ, ಮಿತಿಮೀರಿದ ಜನಸಂಖ್ಯೆ ಅಭಿವೃದ್ಧಿಗೆ ಮಾರಕವಾಗುತ್ತದೆ. ಸಮಸ್ಯೆಗಳು ಹೆಚ್ಚುತ್ತ ಹೋಗುತ್ತವೆ. ಆದ್ದರಿಂದ ಚಿಕ್ಕ ಸಂಸಾರ ಇದ್ದಷ್ಟು ಉತ್ತಮ ಜೀವನ ನಡೆಸಬಹುದು. ಮದುವೆಯಾಗಲು ಗಂಡಿಗೆ 21 ವರ್ಷ, ಹೆಣ್ಣಿಗೆ 18 ವರ್ಷ ತುಂಬಿರಬೇಕು. ಮಕ್ಕಳ ಜನನದ ಅಂತರ ಕನಿಷ್ಠ 3 ವರ್ಷ ಇರಬೇಕು’ ಎಂದು ಸಲಹೆ ನೀಡಿದರು.
‘ಜನನದ ಅಂತರವನ್ನು ಹೆಣ್ಣುಮಕ್ಕಳು ಹಾಗೂ ಪುರುಷರು ಪಾಲಿಸಬೇಕು. ಅದಕ್ಕಾಗಿ ಶಸ್ತ್ರ ಚಿಕಿತ್ಸೆಗಳಿವೆ. ಅವುಗಳನ್ನು ಬಳಸಿಕೊಳ್ಳಬೇಕು’ ಎಂದರು.
ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ನಂದಿತಾ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯಶಂಕರ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಿವಕುಮಾರ, ರಿಮ್ಸ್ ಕಾಲೇಜಿನ ಪ್ರಾಂಶುಪಾಲ ಡಾ. ರಾಹುಲ್ ಕೀರ್ತ, ಜಿಲ್ಲಾ ವಿಬಿಡಿಸಿ ಅಧಿಕಾರಿ ಡಾ.ಚಂದ್ರಶೇಖರಯ್ಯ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಎಂ.ಡಿ. ಶಾಕೀರ್, ಡಾ.ಗಣೇಶ, ರಾಯಚೂರು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಜ್ವಲ್ ಸೇರಿದಂತೆ ರಿಮ್ಸ್, ಎಸ್.ಕೆ.ಇ. ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.
ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಂಖ್ಯಾ ದರವನ್ನು ಹೊಂದಿದ್ದು ಇದನ್ನು ಕಡಿಮೆ ಮಾಡಲು ಜನಸಾಮಾನ್ಯರು ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕುಡಾ.ಸುರೇಂದ್ರ ಬಾಬು ಡಿಎಚ್‌ಒ
ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ:
ವಿಶ್ವ ಜನಸಂಖ್ಯಾ ದಿನಾಚರಣೆಯ ಪ್ರಯುಕ್ತ ನಗರದಲ್ಲಿ ಶುಕ್ರವಾರ ‘ಮಹಿಳೆಯ ದೈಹಿಕ ಮತ್ತು ಮಾನಸಿಕ ಆರೋಗ್ಯ ಸ್ಥಿರತೆಯು ತಾಯ್ತನಕ್ಕೆ ಸರಿಯಾದ ವಯಸ್ಸು’ ಎನ್ನುವ ಘೋಷವಾಕ್ಯದೊಡನೆ ಜಾಗೃತಿ ಜಾಥಾ ನಡೆಯಿತು. ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಆವರಣದಿಂದ ಪ್ರಾರಂಭವಾಗಿ ಭಗತ್‌ಸಿಂಗ್ ವೃತ್ತದ ಮಾರ್ಗವಾಗಿ ತೀನಕಂದಿಲ್ ಉಸ್ಮಾನಿಯಾ ತರಕಾರಿ ಮಾರುಕಟ್ಟೆ ಮೂಲಕ ಮಹಾವೀರ ವೃತ್ತದವರೆಗೆ ಸಾಗಿತು. ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಕುಟುಂಬ ಕಲ್ಯಾಣ ವಿಭಾಗ ರಿಮ್ಸ್ ಭೋಧಕ ಆಸ್ಪತ್ರೆ ಎಸ್.ಕೆ.ಇ. ಪ್ಯಾರಾ ಮೆಡಿಕಲ್ ಕಾಲೇಜು ಆಶ್ರಯದಲ್ಲಿ ಜಾಥಾ ಆಯೋಜಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.