ಲಿಂಗಸುಗೂರು: ಗೋನವಾಟ್ಲ ಮತ್ತು ಕಡದರಗಡ್ಡಿ ಮಧ್ಯೆ ಕೃಷ್ಣಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ ಸಚಿವರು, ಶಾಸಕರು, ಸಂಸದರು ಸೇರಿದಂತೆ ಚುನಾಯಿತ ಪ್ರತಿನಿಧಿಗಳು ಭರವಸೆ ನೀಡುತ್ತಾ ಬಂದಿದ್ದರೂ ಹಣ ಬಿಡುಗಡೆ ಆಯ್ತು ಮರಳಿ ಹೋಯ್ತು ಎಂಬುವ ನಾಟಕದ ನಡುವೆ ಸೇತುವೆ ನಿರ್ಮಾಣ ಕನಸಾಗಿಯೇ ಉಳಿದಿದ್ದಕ್ಕೆ ನಡುಗಡ್ಡೆಯ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಶೀಲಹಳ್ಳಿ–ಹಂಚಿನಾಳ ಬಳಿ ಅವೈಜ್ಞಾನಿಕವಾಗಿ ಸೇತುವೆ ನಿರ್ಮಾಣ ಮಾಡಲಾಗಿದ್ದು, ಅದು ಪ್ರತಿವರ್ಷ ಜನರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ಅಂತೆಯೇ 2018ರಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ₹4 ಕೋಟಿ ಮಂಜೂರಾಗಿತ್ತು. ತುರ್ತು ಭೂಮಿ ಪೂಜೆ ಕಾರ್ಯ ನಡೆಯಲಿದೆ ಎಂಬ ಮಾಹಿತಿಯ ಬೆನ್ನ ಹಿಂದೆಯೇ ಬಿಡುಗಡೆಯಾದ ಹಣವನ್ನು ಅನ್ಯ ಕಾಮಗಾರಿಗಳಿಗೆ ವರ್ಗಾಯಿಸಿಕೊಂಡಿರುವ ಮಾಹಿತಿ ಜನರಲ್ಲಿ ನಿರಾಶೆ ಮೂಡಿಸಿತ್ತು.
ಕಡದರಗಡ್ಡಿ ಬಳಿ ಸೇತುವೆ ನಿರ್ಮಾಣ ಮಾಡಿದರೆ ಕೃಷ್ಣಾ ನದಿ ಮಧ್ಯಭಾಗದ ನಡುಗಡ್ಡೆ ಗ್ರಾಮಗಳಾದ ಕಡದರಗಡ್ಡಿ, ಯರಗೋಡಿ, ಯಳಗುಂದಿ, ಹಂಚಿನಾಳ, ಕರಕಲಗಡ್ಡಿ, ವಂಕಮ್ಮನಗಡ್ಡಿ, ಮ್ಯಾದರಗಡ್ಡಿ ಪ್ರದೇಶದ ಜನತೆಗೆ ತಾಲ್ಲೂಕು ಕೇಂದ್ರಕ್ಕೆ ಬಂದುಹೋಗಲು ಹಾಗೂ ಗುಂತಗೋಳ ಗ್ರಾಮ ಪಂಚಾಯಿತಿ ಸೇರಿದಂತೆ ಬಾಹ್ಯ ಗ್ರಾಮಗಳ ಸಂಪರ್ಕಕ್ಕೆ ಹೆಚ್ಚು ಅನುಕೂಲ ಆಗಲಿದೆ ಎಂಬುದು ಜನರ ಅಂಬೋಣ.
ಈ ಹಿಂದೆ ವಿಧಾನಸಭಾ, ಲೋಕಸಭಾ ಚುನಾವಣೆಗಳಲ್ಲಿ ಮತದಾನ ಬಹಿಷ್ಕಾರದ ಬಿಸಿಗೆ ಲೊಕೋಪಯೋಗಿ ಇಲಾಖೆ ಅಡಿ ಕ್ರಿಯಾಯೋಜನೆ ಸಿದ್ಧಪಡಿಸಿ ಹಣ ಮಂಜೂರಾತಿ ನಾಟಕವಾಡಿದ್ದರು. ಸದ್ಯ ಹಣವೂ ಇಲ್ಲ. ಸೇತುವೆಯೂ ಇಲ್ಲ ಎಂಬಂತಾಗಿದೆ. ಲೊಕೋಪಯೋಗಿ, ಭೂಸೇನಾ, ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಕೂಡ ಹಾರಿಕೆಯ ಉತ್ತರ ನೀಡುತ್ತಿದ್ದಾರೆ.
ಸೇತುವೆ ನಿರ್ಮಾಣಗೊಂಡರೆ ಕೇವಲ 14 ಕಿ.ಮೀ ಅಂತರದಲ್ಲಿ ತಾಲ್ಲೂಕು ಕೇಂದ್ರ ತಲುಪುತ್ತೇವೆ. ಇಲ್ಲದಿದ್ದರೆ ಸುತ್ತುವರಿದು 40 ರಿಂದ 45 ಕಿ.ಮೀ ಪ್ರಯಾಣ ಮಾಡಬೇಕು. ಸೇತುವೆ ನಿರ್ಮಾಣಗೊಂಡರೆ ವಯೋವೃದ್ಧರು, ಗರ್ಭಿಣಿಯರು, ಅನಾರೋಗ್ಯ ಪೀಡಿತರು ಕೇವಲ 2 ಕಿ.ಮೀ ಅಂತರದಲ್ಲಿಯೇ ಸೌಲಭ್ಯ ಪಡೆಯಬಹುದಾಗಿದೆ ಎಂದು ದುರುಗಣ್ಣ ಅಳಲು ತೋಡಿಕೊಂಡಿದ್ದಾರೆ.
2020-21ರಲ್ಲಿ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಿಂದ ₹25 ಕೋಟಿ ಮಂಜೂರಾಗಿತ್ತು. ಕಡದರಗಡ್ಡಿ ಮತ್ತು ಗೋನವಾಟ್ಲ ಮಧ್ಯದ ಕೃಷ್ಣಾ ನದಿಯಲ್ಲಿ ಬೆಂಗಳೂರು ಮೂಲದ ಸಂಸ್ಥೆಯೊಂದು ಕೋರ್ ಕಟ್ಟಿಂಗ್ ಶ್ಯಾಂಪಲ್ ಪಡೆಯುವ ಕಾರ್ಯ ಕೈಗೆತ್ತಿಕೊಂಡಿತ್ತು. ನಂತರದಲ್ಲಿ ಈ ಹಣ ಏನಾಯಿತು ಎಂಬುದು ತಿಳಿಯದಾಗಿದೆ. ಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಬಸಪ್ಪ ದೂರಿದ್ದಾರೆ.
ಕೃಷ್ಣಾ ಪ್ರವಾಹ ಬಂದಾಗೊಮ್ಮೆ ರಕ್ಷಣೆ ಹೆಸರಲ್ಲಿ ಮೋಜಿ ಮಸ್ತಿ ಮಾಡಿ ಕೋಟ್ಯಂತರ ಹಣ ಖರ್ಚು ಮಾಡುತ್ತಿರುವ ಅಧಿಕಾರಿಗಳು, ಪ್ರತಿನಿಧಿಗಳು ನಡುಗಡ್ಡೆ ಜನರ ಶಾಶ್ವತ ಸ್ಥಳಾಂತರ ಪರಿಹಾರಕ್ಕೆ ಮುಂದಾಗುತ್ತಿಲ್ಲ. ಸೇತುವೆ ನಿರ್ಮಾಣಕ್ಕೆ ಮುಂದಾಗದೆ ಹೋದಲ್ಲಿ ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ನಡುಗಡ್ಡೆ ಜನತೆ ಸಾಮೂಹಿಕವಾಗಿ ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.