ADVERTISEMENT

ರಾಯಚೂರು | ಕೇಂದ್ರ ಬಜೆಟ್‌: ಮತ್ತೆ ಹುಸಿಯಾದ ನಿರೀಕ್ಷೆ

ಹಿಂದುಳಿದ ರಾಯಚೂರು ಜಿಲ್ಲೆಯ ಕಡೆಗಣನೆ: ಏಮ್ಸ್‌ ಘೋಷಣೆ ಮರೀಚಿಕೆ, ವಿಮಾನ ನಿಲ್ದಾಣಕ್ಕಿಲ್ಲ ನೆರವು

ಚಂದ್ರಕಾಂತ ಮಸಾನಿ
Published 24 ಜುಲೈ 2024, 6:09 IST
Last Updated 24 ಜುಲೈ 2024, 6:09 IST
ಏಮ್ಸ್‌ನ್ನು ರಾಯಚೂರಿನಲ್ಲಿಯೇ ಸ್ಥಾಪಿಸಬೇಕು ಎಂದು ಒತ್ತಾಯಿಸಿ ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ಸದಸ್ಯರು ರಾಯಚೂರಿನ ಮಹಾತ್ಮ ಗಾಂಧಿ ಪ್ರತಿಮೆ ಎದುರು ನಡೆಸುತ್ತಿರುವ ಧರಣಿ ಮಂಗಳವಾರ 803ನೇ ದಿನಕ್ಕೆ ಪದಾರ್ಪಣೆ ಮಾಡಿದೆ
ಏಮ್ಸ್‌ನ್ನು ರಾಯಚೂರಿನಲ್ಲಿಯೇ ಸ್ಥಾಪಿಸಬೇಕು ಎಂದು ಒತ್ತಾಯಿಸಿ ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ಸದಸ್ಯರು ರಾಯಚೂರಿನ ಮಹಾತ್ಮ ಗಾಂಧಿ ಪ್ರತಿಮೆ ಎದುರು ನಡೆಸುತ್ತಿರುವ ಧರಣಿ ಮಂಗಳವಾರ 803ನೇ ದಿನಕ್ಕೆ ಪದಾರ್ಪಣೆ ಮಾಡಿದೆ   

ರಾಯಚೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನರೇಂದ್ರ ಮೋದಿ ನೇತೃತ್ವದ ಮೂರನೇ ಅವಧಿಯ ಸರ್ಕಾರದಲ್ಲಿ ಬಜೆಟ್ ಮಂಡಿಸಿದರೂ ರಾಯಚೂರು ಜಿಲ್ಲೆಯನ್ನು ನಿರ್ಲಕ್ಷ್ಯಿಸಿರುವುದು ಜಿಲ್ಲೆಯ ಜನರಲ್ಲಿ ಅಸಮಾಧಾನ ಮೂಡಿಸಿದೆ.

ಜಿಲ್ಲೆಗೆ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್‌) ಘೋಷಿಸುವ ಹಾಗೂ ವಿಮಾನ ನಿಲ್ದಾಣದ ಅಭಿವೃದ್ಧಿಗೆ ನೆರವಾಗುವ ನಿರೀಕ್ಷೆ ಮತ್ತೆ ಹುಸಿಯಾಗಿವೆ.

ರಾಜ್ಯದ ಹಿಂದುಳಿದ ಜಿಲ್ಲೆ ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರವೇ ರಾಯಚೂರನ್ನು ಮಹತ್ವಾಕಾಂಕ್ಷಿ ಜಿಲ್ಲೆಯಂದು ಘೋಷಣೆ ಮಾಡಿದೆ. ಆದರೆ, ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಪ್ರಕಟಿಸಿಲ್ಲ. ಜಿಲ್ಲೆಯಲ್ಲಿ ಕೃಷಿಯೇ ಪ್ರಧಾನವಾಗಿರುವ ಕಾರಣ ಕೃಷಿ ಉದ್ಯಮಕ್ಕೂ ಉತ್ತೇಜನ ದೊರೆಯಲಿದೆ ಎನ್ನುವ ನಿರೀಕ್ಷೆಯೂ ಬುಡ ಮೇಲಾಗಿದೆ.

ಏಮ್ಸ್‌ನ್ನು ರಾಯಚೂರಿನಲ್ಲಿಯೇ ಸ್ಥಾಪಿಸಬೇಕು ಎಂದು ಒತ್ತಾಯಿಸಿ ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ 3ನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. ಮಂಗಳವಾರ ಹೋರಾಟವು 803ನೇ ದಿನ ಮುಂದುವರಿದಿದೆ.

ಬಜೆಟ್‌ ಪೂರ್ವದಲ್ಲಿ ಸಮಿತಿಯ ನಿಯೋಗವು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರ ಸ್ವಾಮಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಐಐಟಿಯಿಂದ ವಂಚಿತಗೊಂಡ, ಮಹತ್ವಾಕಾಂಕ್ಷಿ ಜಿಲ್ಲೆ ರಾಯಚೂರಿಗೆ ಏಮ್ಸ್  ಮಂಜೂರು ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಮನವಿಯನ್ನು ಮಾಡಿತ್ತು. ಆದರೆ, ಈ ವಿಷಯದಲ್ಲಿ ಬಜೆಟ್‌ನಲ್ಲಿ ಯಾವುದೇ ವಿಷಯ ಪ್ರಸ್ತಾಪವಾಗಿಲ್ಲ.

ಪ್ರಾದೇಶಿಕ ಅಸಮತೋಲನಾ ನಿವಾರಣೆ ಎನ್ನುವುದು ಕಡತಗಳಲ್ಲಿ ಮಾತ್ರ ಇದೆ. ವಾಸ್ತವದಲ್ಲಿ ಕೇಂದ್ರ ಸರ್ಕಾರ ರಾಯಚೂರು ಜಿಲ್ಲೆಯ ಜನರ ಬೇಡಿಕೆಗೆ ಸ್ಪಂದಿಸುತ್ತಿಲ್ಲ ಎಂದು ಏಮ್ಸ್‌ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಡಾ. ಬಸವರಾಜ ಕಳಸ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರ ರಾಯಚೂರಲ್ಲೇ ಏಮ್ಸ್‌ ಸ್ಥಾಪನೆ ಮಾಡಬೇಕು ಎಂದು ಪಸ್ತಾವ ಸಲ್ಲಿಸಿದರೂ ಸ್ಪಂದನೆ ದೊರೆತಿಲ್ಲ. ರಾಯಚೂರು ವಿಷಯದಲ್ಲಿ ಮಲತಾಯಿ ಧೋರಣೆ ಮುಂದುವರಿದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವಿಮಾನ ನಿಲ್ದಾಣ ಅಭಿವೃದ್ಧಿಗೂ ನೆರವಿಲ್ಲ: ರಾಯಚೂರಲ್ಲಿ ವಿಮಾನ ನಿಲ್ದಾಣವಾಗಬೇಕು. ವಿಮಾನಯಾನ ಸೇವೆ ಆರಂಭವಾಗಬೇಕು ಎನ್ನುವುದೂ ಕಡತಗಳಲ್ಲೇ ಉಳಿದುಕೊಂಡಿದೆ.

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಗೆ ಆಗಮಿಸಿದ್ದ ಕೇಂದ್ರ ಗೃಹ ಸಚಿವರ ಅಮಿತ್ ಶಾ ಅವರು ಶಂಕುಸ್ಥಾಪನೆ ನೆರವೇರಿಸಿ ಒಂದೂವರೆ ವರ್ಷ ಕಳೆದರೂ ಕಾಮಗಾರಿ ಮಾತ್ರ ಪ್ರಾರಂಭವಾಗಿಲ್ಲ. ನಿಲ್ದಾಣ ಅಭಿವೃದ್ಧಿಗೆ ಇರುವ ತಾಂತ್ರಿಕ ಸಮಸ್ಯೆಗಳೂ ನಿವಾರಣೆಯಾಗಿಲ್ಲ. ಚುನಾವಣೆ ಸಂದರ್ಭದಲ್ಲಿ ಮತಗಳನ್ನು ಸೆಳೆಯಲು ಬಿಜೆಪಿಯವರು ರಾಜಕೀಯ ಮಾಡಿದರು ಹೊರತೂ ಅಭಿವೃದ್ಧಿಗೆ ಆದ್ಯತೆ ನೀಡಿಲ್ಲ ಎಂದು ದೂರಿದ್ದಾರೆ.

‘ರಾಯಚೂರಿಗೆ ಏಮ್ಸ್‌ ಘೋಷಣೆಯಾಗಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ. ಕೇಂದ್ರ ಸರ್ಕಾರ ಜಿಲ್ಲೆಯ ಜನರ ಭಾವನೆಗಳೊಂದಿಗೆ ಚೆಲ್ಲಾಟವಾಗುತ್ತಿದೆ’ ಎಂದು ಕೆಪಿಸಿಸಿ ರಾಜ್ಯ ವಕ್ತಾರ ರಜಾಕ್‌ ಉಸ್ತಾದ್ ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.