ADVERTISEMENT

ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು: ಸಿಬಿಐ ತನಿಖೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 13:00 IST
Last Updated 18 ಜುಲೈ 2019, 13:00 IST

ರಾಯಚೂರು: ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವಿನ ಪ್ರಕರಣದ ಸಿಐಡಿ ತಂಡದ ತನಿಖಾ ವರದಿಯಲ್ಲಿ ಆತ್ಮಹತ್ಯೆ ಎಂದು ನಮೂದಿಸಿರುವುದು ನೋವಿನ ಸಂಗತಿಯಾಗಿದೆ. ಈ ಪ್ರಕರಣ ಸಿಬಿಐ ತನಿಖೆಗೆ ವಹಿಸಲು ನಿಯೋಗದ ಮೂಲಕ ತೆರಳಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ಸಮಾಜದ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ವಿಶ್ವಕರ್ಮ ಸಮಾಜದ ಜಿಲ್ಲಾ ಅಧ್ಯಕ್ಷ ಗುರು ವಿಶ್ವಕರ್ಮ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಐಡಿ ತನಿಖಾ ವರದಿಯಲ್ಲಿ ವಿಶ್ವಾಸವಿಲ್ಲ. ಪ್ರಭಾವಿಗಳ ಒತ್ತಡದಿಂದ ವರದಿ ತಿರುಚಲಾಗಿದೆ. ದೇಶವೇ ಆಘಾತ ವ್ಯಕ್ತಪಡಿಸಿದ ಈ ಘಟನೆಗೆ ಅನ್ಯಾಯ ಮಾಡಿದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖಂಡ ಮಾರುತಿ ಬಡಿಗೇರ ಮಾತನಾಡಿ, ಐಎಎಸ್‌ ಅಧಿಕಾರಿ ಡಿ.ಕೆ.ರವಿ, ಡಿವೈಎಸ್‌ಪಿ ಗಣಪತಿ, ಬಾಲಕಿ ದಾನಮ್ಮ ಪ್ರಕರಣದಲ್ಲಿ ವ್ಯತಿರಿಕ್ತವಾದ ವರದಿ ನೀಡಿರುವ ಸಿಐಡಿ ತನಿಖೆಯ ಬಗ್ಗೆ ಮೊದಲಿನಿಂದಲೂ ಅನುಮಾನವಿತ್ತು ಎಂದು ಆರೋಪಿಸಿದರು.

ADVERTISEMENT

ವಿದ್ಯಾರ್ಥಿನಿ ವ್ಯಾಸಂಗ ಮಾಡುತ್ತಿದ್ದ ನವೋದಯ ಶಿಕ್ಷಣಯ ಸಂಸ್ಥೆಯವರು ಸಿಐಡಿ ತನಿಖಾ ವರದಿ ನೀಡುವ ಮುಂಚೆಯೇ ಇದು ಆತ್ಮಹತ್ಯೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದರು. ಇದೇ ಸಂಸ್ಥೆಯ ಆಸ್ಪತ್ರೆಯಲ್ಲಿ ಕೆಲಸ ಮಾಡಿರುವ ವೈದ್ಯರೇ ಮರಣೋತ್ತರ ಪರೀಕ್ಷೆಯನ್ನು ನಡೆಸಿದ್ದಾರೆ. ಸಂಸ್ಥೆಯ ಅಧ್ಯಕ್ಷರು ಶಾಸಕರೂ ಕೂಡ ಆಗಿರುವುದರಿಂದ ಬಹಳಷ್ಟು ಅನುಮಾನಕ್ಕೆ ಕಾರಣವಾಗಿದೆ ಎಂದರು.

ಸಂಸದ ರಾಜಾ ಅಮರೇಶ್ವರ ನಾಯಕ ನೇತೃತ್ವದಲ್ಲಿ ಸಮಾಜದ ಪ್ರಮುಖರನ್ನು ಒಳಗೊಂಡಂತೆ ಮುಂದಿನ ತಿಂಗಳು ದೆಹಲಿಗೆ ನಿಯೋಗದ ಮೂಲಕ ತೆರಳಿ ಗೃಹ ಸಚಿವರನ್ನು ಭೇಟಿ ಮಾಡಿ ಸಿಬಿಐ ತನಿಖೆಗೆ ಮನವಿ ಮಾಡಲಾಗುತ್ತದೆ ಎಂದು ತಿಳಿಸಿದರು.

ನಾಗರಾಜ ಪತ್ತಾರ, ಮಲ್ಲೇಶ, ಗಿರಿಬಾಬು, ವೀರೇಶ, ಈಶ್ವರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.