ADVERTISEMENT

ತೆರಿಗೆ ರಹಿತ ಆಮದು ಪ್ರಸ್ತಾವನೆ ಕೈಬಿಡಲು ಒತ್ತಾಯ

ಹಾಲು ಉತ್ಪಾದಕರ ಸಂಘಗಳ ಪದಾಧಿಕಾರಿಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2019, 15:31 IST
Last Updated 11 ಅಕ್ಟೋಬರ್ 2019, 15:31 IST
ರಾಯಚೂರಿನಲ್ಲಿ ಶುಕ್ರವಾರ ಹಾಲು ಉತ್ಪಾದಕರ ಸಂಘಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು
ರಾಯಚೂರಿನಲ್ಲಿ ಶುಕ್ರವಾರ ಹಾಲು ಉತ್ಪಾದಕರ ಸಂಘಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು   

ರಾಯಚೂರು: ಅಂತರರಾಷ್ಟ್ರೀಯ ಮುಕ್ತ ವ್ಯಾಪಾರ ಒಪ್ಪಂದದಿಂದ ವಿದೇಶಿ ಹಾಲು ಮತ್ತು ಅದರ ಉತ್ಪನ್ನಗಳ ಮೇಲೆ ಆಮದು ಸುಂಕ ರದ್ದುಪಡಿಸುವ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದಿದ್ದು, ಇದಕ್ಕೆ ಅನುಮೋದನೆ ನೀಡಬಾರದು ಎಂದು ಒತ್ತಾಯಿಸಿ ಹಾಲು ಉತ್ಪಾದಕರ ಸಂಘಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಶುಕ್ರವಾರ ಪ್ರತಿಭಟನೆ ನಡೆಸಿದರು.

ವಿದೇಶಿ ಹೈನು ಉತ್ಪನ್ನಗಳ ಮೇಲೆ ಆಮದು ಸುಂಕ ರದ್ದುಪಡಿಸಿ ಮುಕ್ತ ವ್ಯಾಪಾರಕ್ಕೆ ಅನುಮತಿ ನೀಡಿದರೆ ಜಿಲ್ಲೆಯಲ್ಲಿ 112 ಹಾಲು ಉತ್ಪಾದಕರ ಸಹಕಾರ ಸಂಘಗಳ 10 ಸಾವಿರ ರೈತರ ಕುಟುಂಬಗಳಿಗೆ ತೊಂದರೆಯಾಗಲಿದೆ. ಹೈನುಗಾರಿಕೆ ಮುಖ್ಯ ಕಸುಬು ಮಾಡಿಕೊಂಡಿರುವ ರೈತರು ಪ್ರತಿದಿನ 36 ಸಾವಿರ ಲೀಟರ್ ಹಾಲು ಸರಬರಾಜು ಮಾಡುತ್ತಿದ್ದಾರೆ. ಮುಕ್ತ ವ್ಯಾಪಾರ ಒಪ್ಪಂದದಿಂದ ಹೈನುಗಾರಿಕೆಯಿಂದ ಜೀವನ ನಡೆಸುವವರ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು.

ದೇಶಿಯ ತಳಿಗಳು ಕಡಿಮೆ ಹಾಲು ನೀಡುತ್ತಿವೆ. ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ದೇಶದವರಿಗೆ ಉತ್ಪಾದನೆ ವೆಚ್ಚ ಕಡಿಮೆಯಿದ್ದು, ವಿದೇಶಿ ಹಾಲು ಹಾಗೂ ಉತ್ಪನ್ನದ ವಿರುದ್ಧ ಪೈಪೋಟಿ ನಡೆಸುವುದು ಕಷ್ಟವಾಗಲಿದೆ. ಇದರಿಂದ ದೇಶದ ಹೈನು ಉದ್ಯಮ ಸ್ಥಗಿತಗೊಳ್ಳಲಿದೆ. ನಿರುದ್ಯೋಗ ಮತ್ತಷ್ಟು ಹೆಚ್ಚಾಗಲಿದೆ. ಆದ್ದರಿಂದ ತೆರಿಗೆ ರಹಿತ ಆಮದು ಪ್ರಸ್ತಾವನೆ ಕೈಬಿಡಬೇಕು ಎಂದು ಆಗ್ರಹಿಸಿದರು.

ADVERTISEMENT

ಹಾಲು ಉತ್ಪಾದಕರ ಸಂಘದ ಪದಾಧಿಕಾರಿಗಳಾದ ಜಿ.ಸತ್ಯನಾರಾಯಣ, ಎ.ರವೀಂದ್ರ, ಭೀಮನಗೌಡ, ಸೀತಾರಾಮಲಕ್ಷ್ಮೀ, ನಾಗಲಕ್ಷ್ಮಮ್ಮ, ದೇವಿಕಾ, ನಾಗೇಶ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.