ADVERTISEMENT

ಕಾಲುವೆಗೆ ನೀರು ಹರಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 15:52 IST
Last Updated 15 ಜುಲೈ 2019, 15:52 IST

ರಾಯಚೂರು: ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗಿದ್ದರಿಂದ ಆಲಮಟ್ಟಿ, ನಾರಾಯಣಪುರ ಜಲಾಶಯ ತುಂಬಿಕೊಂಡಿವೆ. ಕಾಲುವೆಗಳಿಗೆ ನೀರು ಹರಿಸುವ ಬದಲು ಕೃಷ್ಣಾ ಜಲಭಾಗ್ಯ ನಿಗಮ ಕಾಲುವೆಗಳ ದುರಸ್ತಿಯ ನೆಪವೊಡ್ಡ ನದಿಯ ಮೂಲಕ ಆಂಧ್ರಪ್ರದೇಶಕ್ಕೆ ನೀರು ಹರಿಸಲು ಮುಂದಾಗಿರುವುದನ್ನು ವಿರೋಧಿಸಿ ಜುಲೈ 30ರಂದು ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡ ಅಮರಣ್ಣ ಗುಡಿಹಾಳ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 156 ತಾಲ್ಲೂಕುಗಳಲ್ಲಿ ಬರಗಾಲ ಎದುರಾಗಿದ್ದು, ಜನ ಜಾನುವಾರು ತತ್ತರಿಸುವಂತಾಗಿದೆ. ಆದರೆ, ರಾಜ್ಯದಲ್ಲಿ ಜನರು ತಲೆತಗ್ಗಿಸುವಂತಹ ಘಟನೆಗಳು ನಡೆದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಂಗಲ್‌ ಕಟಿಂಗ್ ಸೇರಿದಂತೆ ಸಣ್ಣಪುಟ್ಟ ಕೆಲಸಗಳಿಗೂ ಪ್ಯಾಕೇಜ್ ಮಾಡಿಕೊಂಡು ಬೋಗಸ್ ಬಿಲ್‌ ಸೃಷ್ಟಿಸಿ ಸರ್ಕಾರದ ಹಣ ಲೂಟಿ ಮಾಡಲಾಗುತ್ತಿದೆ. ಜಲಾಶಯದಲ್ಲಿ ಇರುವ ನೀರನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಎರಡೂ ಬೆಳೆಗಳಿಗೆ ನೀರು ಕೊಡಬಹುದಾಗಿದೆ. ಭ್ರಷ್ಟ ಅಧಿಕಾರಿಗಳು ಆಂಧ್ರದವರೊಂದಿಗೆ ಶಾಮೀಲಾಗಿ ನದಿಗೆ ನೀರು ಹರಿಸಲು ಹೊರಟಿದ್ದಾರೆ. ಆದ್ದರಿಂದ ಕಾಲುವೆಗಳಲ್ಲಿ ಯಾವುದೇ ಕಾಮಗಾರಿ ಕೈಗೊತ್ತಿಕೊಳ್ಳದೇ ನೀರು ಹರಿಸಲು ಮುಂದಾಗಬೇಕು. ಲಿಂಗಸುಗೂರು ಹಾಗೂ ದೇವದುರ್ಗ ಶಾಸಕರು ಈ ಬಗ್ಗೆ ಗಮನಹರಿಸಿ ಕಾಲುವೆಗಳಿಗೆ ನೀರು ಬಿಡಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಸಾಲಮನ್ನಾ ಕಟ್ಟುಪಾಡು:ರೈತರ ₹ 48 ಸಾವಿರ ಕೋಟಿ ಸಾಲಮನ್ನಾ ಮಾಡುವುದಾಗಿ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ರಾಜ್ಯ ಸರ್ಕಾರ ಆಡಳಿತ ನಡೆಸುತ್ತಿದೆ. ಆದರೆ, ವಾಸ್ತವದಲ್ಲಿ ಹಲವು ಕಟ್ಟುಪಾಡುಗಳನ್ನು ಹಾಕಿ ಸಾಲಮನ್ನಾ ದೊರೆಯದಂತೆ ಮಾಡಲಾಗಿದೆ. ಬ್ಯಾಂಕಿನಲ್ಲಿ ನರೇಗಾ ಕೂಲಿಯನ್ನು ರೈತರಿಗೆ ಕೊಡದೇ ಸಾಲಕ್ಕೆ ಜಮಾ ಮಾಡಿಕೊಳ್ಳಲಾಗುತ್ತಿದೆ. ಬ್ಯಾಂಕಿನಲ್ಲಿ ರೈತರಿಗೆ ಗೌರವವೇ ಇಲ್ಲದಂತಾಗಿದೆ ಎಂದರು.

ಬೆಳೆ ವಿಮೆಯ ಪರಿಹಾರ, ಬೆಳೆನಷ್ಟ ಪರಿಹಾರ ವಿತರಣೆ ಮಾಡಬೇಕು. ಪಂಪ್‌ಸೆಟ್‌ಗಳಿಗೆ 12 ಗಂಟೆ ವಿದ್ಯುತ್ ಸರಬರಾಜು ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನಿಟ್ಟುಕೊಂಡು ಪ್ರತಿಭಟನೆ ಮಾಡಲಾಗುತ್ತದೆ. ರಾಜ್ಯದಲ್ಲಿ ಎಲ್ಲ ಪಕ್ಷದ ಶಾಸಕರು ಜವಾಬ್ದಾರಿ ಮರೆತು ವರ್ತಿಸುತ್ತಿದ್ದಾರೆ. ಎಲ್ಲ ಗೊಂದಲಗಳಿಗೆ ತೆರೆ ಎಳೆಯಲು ರಾಜ್ಯಪಾಲರು ಹಾಗೂ ಕೇಂದ್ರ ಸರ್ಕಾರ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಮಲ್ಲನಗೌಡ ಗಬ್ಬೂರು, ಬೂದಯ್ಯ ಸ್ವಾಮಿ, ಶಿವನಗೌಡ, ಪ್ರಭಾಕರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.