ADVERTISEMENT

ವಸತಿ ನಿಲಯಗಳ ಸೌಕರ್ಯಕ್ಕೆ ವಿದ್ಯಾರ್ಥಿ ಒಕ್ಕೂಟದಿಂದ ಮನವಿ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 13:59 IST
Last Updated 17 ಆಗಸ್ಟ್ 2019, 13:59 IST
ರಾಯಚೂರಿನಲ್ಲಿ ಸಿಂಧನೂರು ಹಾಸ್ಟೆಲ್‌ಗಳ ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳು ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಜಿಲ್ಲಾಡಳಿತ ಅಧಿಕಾರಿಗೆ ಶನಿವಾರ ಮನವಿ ಸಲ್ಲಿಸಿದರು
ರಾಯಚೂರಿನಲ್ಲಿ ಸಿಂಧನೂರು ಹಾಸ್ಟೆಲ್‌ಗಳ ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳು ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಜಿಲ್ಲಾಡಳಿತ ಅಧಿಕಾರಿಗೆ ಶನಿವಾರ ಮನವಿ ಸಲ್ಲಿಸಿದರು   

ರಾಯಚೂರು: ಸಿಂಧನೂರು ತಾಲ್ಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿರುವ ಎಲ್ಲ ವಸತಿ ನಿಲಯಗಳ ಸುಧಾರಣೆಗೆ ಅಗತ್ಯ ಕ್ರಮಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಸಿಂಧನೂರು ಹಾಸ್ಟೆಲ್‌ಗಳ ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಶನಿವಾರ ಮನವಿ ಸಲ್ಲಿಸಿದರು.

ವಸತಿ ನಿಲಯಗಳಿಗೆ ಜಿಲ್ಲಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ, ಪರಿಶೀಲನೆ ನಡೆಸಿ, ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಜರುಗಿಸಬೇಕು. ಖಾಸಗಿ ಕಟ್ಟಡಗಳಲ್ಲಿ ನಡೆಯುತ್ತಿರುವ ವಸತಿ ನಿಲಯಗಳಿಗೆ ಸ್ವಂತ ಕಟ್ಟಡ ನಿರ್ಮಿಸಬೇಕು. ಈಚೆಗೆ ಮೃತಪಟ್ಟ ವಸತಿ ನಿಲಯದ ವಿದ್ಯಾರ್ಥಿ ಮುರುಡೇಶ ಕುಟುಂಬಕ್ಕೆ ₹ 10 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕು ಅಧಿಕಾರಿ ಜಯಮ್ಮ ಅವರು ದುರಹಂಕಾರದಿಂದ ವರ್ತಿಸುತ್ತಿದ್ದು, ಅವರನ್ನು ಸೇವೆಯಿಂದ ವಜಾಗೊಳಿಸಬೇಕು. ವಾರ್ಡನ್‌ಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ವಸತಿ ನಿಲಯಗಳ ನಿರ್ವಹಣೆ ಅನುದಾನದಲ್ಲಿ ದುರ್ಬಳಕೆಯಾಗಿದ್ದು, ತನಿಖೆ ನಡೆಸಬೇಕು ಎಂದರು.

ADVERTISEMENT

ಬಾಲಕಿಯರ ವಸತಿ ನಿಲಯಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿ, ಕಾವಲುಗಾರರನ್ನು ನೇಮಿಸಬೇಕು. ಪ್ರತ್ಯೇಕ ಗ್ರಂಥಾಲಯ, ಕಂಪ್ಯೂಟರ್, ದೂರದರ್ಶನ, ಹೊದಿಕೆಗಳು, ಶೌಚಾಲಯ, ಸೊಳ್ಳೆ ಪರದೆ, ಚಿಕಿತ್ಸೆಗೆ ಸಹಾಯಧನ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ಸಂಚಾಲಕರಾದ ನಾಗರಾಜ ಪೂಜಾರ, ಧರ್ಮರಾಜ ಗೋನಾಳ, ಅಶೋಕ ನಂಜಲದಿನ್ನಿ, ಮಂಜುನಾಥ ಗಾಂಧಿನಗರ, ಹನುಮಂತ ಹಂಪನಾಳ, ನಿರುಪಾದಿ ಸಾಸಲಮರಿ, ದೇವರಾಜ ಗುಂಜಳ್ಳಿ, ಮೌನೇಶ, ಹನುಮಂತ, ಯಮನೂರ, ಶರಣಪ್ಪ, ಸೋಮನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.