ಕವಿತಾಳ ಸಮೀಪದ ಉಟಕನೂರು ಗ್ರಾಮದಲ್ಲಿ ಗುರುವಾರ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ನಡೆಯಿತು
ಕವಿತಾಳ: ಸಮೀಪದ ಉಟಕನೂರು ಅಡವಿ ಸಿದ್ದೇಶ್ವರ ಮಠದ ಬಸವಲಿಂಗ ದೇಶೀಕೇಂದ್ರ ಶಿವಯೋಗಿಗಳ 161ನೇ ಪುಣ್ಯಸ್ಮರಣೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಗುರುವಾರ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾ ಮಂಗಳಾರತಿ ಸೇರಿದಂತೆ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ಜಂಗಮ ಗಣಾರಾಧನೆ, ದಾಸೋಹ ಮಹಾಪ್ರಸಾದಕ್ಕೆ ಚಾಲನೆ ನೀಡಲಾಯಿತು.
ಡೊಳ್ಳು, ಭಾಜಾಭಜಂತ್ರಿ ಮತ್ತು ಕಳಸಗಳೊಂದಿಗೆ ನಡೆದ ಪಲ್ಲಕ್ಕಿ ಉತ್ಸವದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಭಕ್ತರು ಪಾಲ್ಗೊಂಡರು. ಮರಿಬಸವರಾಜ ದೇಶೀಕೇಂದ್ರ ಸ್ವಾಮೀಜಿಗೆ ಮಡಿ ಬಟ್ಟೆ ಹಾಸಿದ ಭಕ್ತರು ಭಕ್ತಿಯಿಂದ ಪಾದಪೂಜೆ ನೆರವೇರಿಸಿದರು.
ಸ್ವಾಮೀಜಿ ಮಾತನಾಡಿ,‘ಬಸವಲಿಂಗ ಸ್ವಾಮೀಜಿ 161ನೇ ಹಾಗೂ ಮರಿಬಸವಲಿಂಗ ಸ್ವಾಮೀಜಿ 35ನೇ ಪುಣ್ಯ ಸ್ಮರಣೆ ಅಂಗವಾಗಿ ಜ.11ರಂದು ಜಾತ್ರಾ ಮಹೋತ್ಸವ ಜರುಗುತ್ತದೆ. 18 ದಿನಗಳವರೆಗೆ ಮಠದಲ್ಲಿ ನಿತ್ಯ ಪುರಾಣ ಪ್ರವಚನ ನಡೆಯಲಿದ್ದು, ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದರು.
ನಿಲೋಗಲ್ ಬೃಹನ್ಮಠದ ಪಂಚಾಕ್ಷರಿ ಸ್ವಾಮಿ, ಹರ್ಲಾಪುರದ ಸದಾನಂದ ಶಾಸ್ತ್ರೀ, ಮನೋಹರ ಹಿರೇಮಠ, ಪ್ರತಾಪ ಕುಷ್ಠಗಿ, ಅಮರಯ್ಯ ಹಿರೇಮಠ, ವೀರಭದ್ರಯ್ಯ, ಶರಣಯ್ಯ, ಬಸವಲಿಂಗಯ್ಯ ಬಳಗಾನೂರು, ಅಯ್ಯನಗೌಡ ಸಣ್ಣಜಿನ್, ಎಸ್.ಶರಣೇಗೌಡ, ಚಂದ್ರಪ್ಪಗೌಡ, ರಾಜಶೇಖರಗೌಡ, ಶಿವರಾಜಗೌಡ, ಮಲ್ಕನಗೌಡ, ಬಸವಲಿಂಗಪ್ಪ ಸುಂಕನೂರು, ನಿರಂಜನ, ಶಿವು, ಸಚಿನ್, ದೊಡ್ಡಬಸವ ಕುಂಬಾರ, ಅಮರಗುಂಡಪ್ಪ ಹೂಗಾರ, ಮಲ್ಲಯ್ಯ ಹೂಗಾರ ಸೇರಿದಂತೆ, ಧೋತರಬಂಡಿ, ಬೆಳವಾಟ, ಬೆಳ್ಳಿಗನೂರು, ದಿದ್ದಗಿ, ತಡಕಲ್ ಗ್ರಾಮದ ಭಕ್ತರು ಪಲ್ಲಕ್ಕಿ ಉತ್ಸವದಲ್ಲಿ
ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.