ಕವಿತಾಳ: ಮಸ್ಕಿ ತಾಲ್ಲೂಕಿನ ವಟಗಲ್ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿ ನಾಲ್ಕು ವರ್ಷಗಳಿಂದ ನನೆಗುದಿಗೆ ಬಿದ್ದಿದೆ.
ಗ್ರಾಮದ ಪರಿಶಿಷ್ಟರ ಓಣಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆಯಡಿ 2019-20 ನೇ ಸಾಲಿನಲ್ಲಿ ಅಂದಿನ ಶಾಸಕ ಪ್ರತಾಪಗೌಡ ಪಾಟೀಲ ಅವರು ₹12 ಲಕ್ಷ ಅನುದಾನ ನೀಡಿದ್ದರು.
ಕಾಮಗಾರಿಯ ಹೊಣೆ ಹೊತ್ತುಕೊಂಡ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಸ್ಥಳೀಯರಿಗೆ ಉಪ ಗುತ್ತಿಗೆ ನೀಡಿದ್ದಾರೆ. ಮೇಲ್ಚಾವಣಿ ಹಂತದವರೆಗೂ ಕಟ್ಟಡ ನಿರ್ಮಾಣ ಮಾಡಲಾಗಿದೆ. ಹಣ ಬಿಡುಗಡೆ ಮಾಡದ ಕಾರಣ ಉಪ ಗುತ್ತಿಗೆದಾರ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.
‘ಮೂರು ವರ್ಷಗಳಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ. ಪರಿಶಿಷ್ಟರ ಅಭಿವೃದ್ದಿಗಾಗಿ ಮೀಸಲಿಟ್ಟ ಹಣವನ್ನು ಸಮರ್ಪಕವಾಗಿ ಬಳಕೆ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಅಪೂರ್ಣ ಕಾಮಗಾರಿಯಿಂದ ಪ್ರಯೋಜನ ಇಲ್ಲದಂತಾಗಿದೆ’ ಎಂದು ಸ್ಥಳೀಯರಾದ ಮಹಾಂತೇಶ ಮತ್ತು ಯಲ್ಲಪ್ಪ ಆರೋಪಿಸಿದರು.
‘ಕಾಮಗಾರಿ ತಡವಾಗಿ ಆರಂಭಿಸಲಾಗಿದೆ. ಸಮುದಾಯ ಭವನ ನಿರ್ಮಾಣ ಜವಾಬ್ದಾರಿಯನ್ನು ಸ್ಥಳೀಯರಿಗೆ ವಹಿಸಿಕೊಟ್ಟು ಇದುವರೆಗೂ ಸಾಮಗ್ರಿಗಳನ್ನು ನೀಡಲಾಗಿದೆ. ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಪೂರ್ಣಗೊಳಿಸಲು ಉಪ ಗುತ್ತಿಗೆದಾರರಿಗೆ ಸೂಚಿಸಲಾಗುವುದು’ ಎಂದು ನಿರ್ಮಿತಿ ಕೇಂದ್ರದ ಎಂಜಿನಿಯರ್ ವಿನಾಯಕ ತಿಳಿಸಿದರು.
‘ಸಾಮಗ್ರಿ ವಿತರಣೆ ಮಾಡಿದ್ದಾರೆ. ವಿವಿಧ ಹಂತದಲ್ಲಿ ಬಿಡುಗಡೆ ಮಾಡಬೇಕಿದ್ದ ಹಣವನ್ನು ಸಕಾಲದಲ್ಲಿ ನೀಡದ ಕಾರಣ ಕಾಮಗಾರಿ ಸ್ಥಗಿತಗೊಳಿಸಿದ್ದೇವೆ. ಹಣ ಬಿಡುಗಡೆ ಮಾಡಿದರೆ ಕಾಮಗಾರಿಯನ್ನು ಮುಂದುವರಿಸುತ್ತೇವೆ’ ಎಂದು ಉಪ ಗುತ್ತಿಗೆದಾರ ಬಲವಂತರಾಯ ವಟಗಲ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.