ರಾಯಚೂರು: ಬಿಸಿಲು ನಾಡು ಹೊರತು ಪಡಿಸಿ ಬೆಳಗಾವಿ ಸೇರಿ ಅನೇಕ ಜಿಲ್ಲೆಗಳಲ್ಲಿ ಮಳೆಯಾಗುತ್ತಿರುವ ಕಾರಣ ಜಿಲ್ಲೆಗೆ ಕಡಿಮೆ ಪ್ರಮಾಣದಲ್ಲಿ ತರಕಾರಿ ಆವಕವಾಗಿದೆ. ಬಹುತೇಕ ತರಕಾರಿ ಬೆಲೆ ಪ್ರತಿ ಕೆಜಿಗೆ ₹ 20 ಹೆಚ್ಚಳವಾಗಿದೆ.
ಟೊಮೆಟೊ ಹಾಗೂ ಬದನೆಕಾಯಿ ಜಿಲ್ಲೆಯ ಜನರ ಅಚ್ಚುಮೆಚ್ಚಿನ ತರಕಾರಿಯಾಗಿದೆ. ಅನ್ನದ ಜತೆಗೆ ಟೊಮೆಟೊ ಸಾರು, ರೊಟ್ಟಿಯ ಜತೆ ಬದನೆಕಾಯಿ ಪಲ್ಯ ಇದ್ದರೆ ಸಾಕು ಎನ್ನುವವರೇ ಜಾಸ್ತಿ. ಈ ವಾರ ಟೊಮೆಟೊ, ಬದನೆಕಾಯಿ ಪ್ರಿಯರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.
ಸಗಟು ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಪ್ರತಿ ಕ್ವಿಂಟಲ್‌ಗೆ ₹ 1,200 ಇದೆ. ಉತ್ಪಾದನೆ ಕಡಿಮೆ ಇದೆ. ಸಾರ್ವಕಾಲಿಕ ಬೇಡಿಕೆ ಇರುವ ಕಾರಣ, ಅಡುಗೆಗೂ ಅಗತ್ಯವಾದ್ದರಿಂದ ಬೆಳ್ಳುಳ್ಳಿ ಬೆಲೆ ಮಾತ್ರ ಕಡಿಮೆ ಆಗುತ್ತಿಲ್ಲ.
ಬೇಸಿಗೆಯಲ್ಲಿ ನಾಟಿ ಮಾಡಿದ್ದ ಈರುಳ್ಳಿ ಫಸಲು ಮಾರುಕಟ್ಟೆಗೆ ಬರುತ್ತಿದೆ. ಮಳೆ ಹಾಗೂ ತಂಪಾದ ಹವಾಗುಣಕ್ಕೆ ಗೋದಾಮುಗಳಲ್ಲಿ ಸಂಗ್ರಹಿಸಿಡಲಾಗಿದ್ದ ಈರುಳ್ಳಿ ಸಿಪ್ಪೆ ನಿಧಾನವಾಗಿ ಕಪ್ಪು ಬಣ್ಣಕ್ಕೆ ತಿರುಗಲು ಶುರುವಾಗಿದೆ. ಹೀಗಾಗಿ ದಿಢೀರ್ ಹೆಚ್ಚುವರಿ ಈರುಳ್ಳಿ ಮಾರುಕಟ್ಟೆಗೆ ಬಂದು ಪ್ರತಿ ಕ್ವಿಂಟಲ್‌ಗೆ ₹ 500 ಕಡಿಮೆಯಾಗಿದೆ. ಪ್ರತಿ ಕೆ.ಜಿಗೂ ₹ 5 ಕಡಿಮೆಯಾಗಿದೆ.
ಆಲೂಗಡ್ಡೆ, ಬದನೆಕಾಯಿ, ಹಿರೇಕಾಯಿ, ಎಲೆಕೋಸು, ಹೂಕೋಸು, ಗಜ್ಜರಿ, ಬೀಟ್‌ರೂಟ್, ಬೀನ್ಸ್, ತೊಂಡೆಕಾಯಿ, ಡೊಣಮೆಣಸಿನಕಾಯಿ, ತುಪ್ಪದ ಹಿರೇಕಾಯಿ, ಚವಳೆಕಾಯಿ, ಸೌತೆಕಾಯಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 2 ಸಾವಿರ ಹೆಚ್ಚಾಗಿದೆ. ಟೊಮೆಟೊ ಹಾಗೂ ಬೆಂಡೆಕಾಯಿ ಬೆಲೆಯೂ ಪ್ರತಿ ಕ್ವಿಂಟಲ್‌ಗೆ ₹ 1 ಸಾವಿರ ಹೆಚ್ಚಳವಾಗಿದೆ.
ನಾಸಿಕ್‌ನಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಆವಕವಾಗಿದೆ. ಬೆಳಗಾವಿ ಜಿಲ್ಲೆಯಿಂದ ಹಸಿ ಮೆಣಸಿನಕಾಯಿ, ಕೊತ್ತಂಬರಿ, ಮೆಂತೆ ಸೊಪ್ಪು ಬಂದಿದೆ.
ತೆಲಂಗಾಣ ಗಡಿ ಗ್ರಾಮ ಹಾಗೂ ರಾಯಚೂರು ಗ್ರಾಮೀಣ ಪ್ರದೇಶದಿಂದ ಹಿರೇಕಾಯಿ, ಅವರೆಕಾಯಿ, ಸೋರೆಕಾಯಿ, ಸೌತೆಕಾಯಿ, ಎಲೆಕೋಸು, ಹೂಕೋಸು ಇಲ್ಲಿಯ ತರಕಾರಿ ಸಗಟು ಮಾರುಕಟ್ಟೆಗೆ ಬಂದಿದೆ.
‘ಬೆಳಗಾವಿ ಜಿಲ್ಲೆಯಲ್ಲಿ ನದಿಗಳಿಗೆ ಮಹಾಪೂರ ಬಂದಿದೆ. ಅತಿವೃಷ್ಟಿ ಕಾರಣ ಹೆಚ್ಚು ತರಕಾರಿ ಬಂದಿಲ್ಲ. ಬಂದರೂ ಬೆಲೆ ಅಧಿಕವಾಗಿದೆ. ಆಂಧ್ರಪ್ರದೇಶದ ಕೆಲ ಜಿಲ್ಲೆಗಳಿಂದ ತರಕಾರಿ ಮಾರುಕಟ್ಟೆಗೆ ಬಂದಿದೆ’ ಎಂದು ತರಕಾರಿ ವ್ಯಾಪಾರಿ ರಾಜು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.