ADVERTISEMENT

ಮಾರುಕಟ್ಟೆ ನೋಟ | ರಾಯಚೂರು: ತರಕಾರಿ ಬೆಲೆ ಪ್ರತಿ ಕೆ.ಜಿಗೆ ₹20 ಏರಿಕೆ

ಚಂದ್ರಕಾಂತ ಮಸಾನಿ
Published 27 ಏಪ್ರಿಲ್ 2025, 8:03 IST
Last Updated 27 ಏಪ್ರಿಲ್ 2025, 8:03 IST
ರಾಯಚೂರಿನ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡುತ್ತಿರುವ ವ್ಯಾಪಾರಿ/ ಚಿತ್ರ: ಶ್ರೀನಿವಾಸ ಇನಾಂದಾರ್
ರಾಯಚೂರಿನ ಉಸ್ಮಾನಿಯಾ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡುತ್ತಿರುವ ವ್ಯಾಪಾರಿ/ ಚಿತ್ರ: ಶ್ರೀನಿವಾಸ ಇನಾಂದಾರ್   

ರಾಯಚೂರು: ಜಿಲ್ಲೆಯಲ್ಲಿ ಒಂದು ವಾರದಿಂದ ಗರಿಷ್ಠ ಉಷ್ಣಾಂಶ 43 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲೇ ಇದೆ. ರಣ ಬಿಸಿಲಿಗೆ ತರಕಾರಿ ಹಾಗೂ ಸೊಪ್ಪು ಬಹುಬೇಗ ಬಾಡುವ ಕಾರಣ ಈ ವಾರ ರಾಯಚೂರು ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ತರಕಾರಿ ಬಂದಿದೆ.

ಗ್ರಾಹಕರು ಹೆಚ್ಚು ಇಷ್ಟಪಡುವ ಬಹುತೇಕ ತರಕಾರಿಗಳ ಬೆಲೆ ಪ್ರತಿ ಕೆ.ಜಿಗೆ ₹ 20 ಹೆಚ್ಚಾಗಿದೆ. ಬಿಸಿಲಲ್ಲಿ ಹೆಚ್ಚು ಊಟ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಗ್ರಾಹಕರು ಚೌಕಾಶಿ ಮಾಡಿಯೇ ತರಕಾರಿ ಖರೀದಿಸುತ್ತಿದ್ದಾರೆ.

ಪ್ರತಿ ಕ್ವಿಂಟಲ್‌ಗೆ ಮೆಣಸಿನಕಾಯಿ, ಹೂಕೋಸು, ಗಜ್ಜರಿ, ಬೀಟ್‌ರೂಟ್‌, ಹಿರೇಕಾಯಿ, ಬೆಂಡೆಕಾಯಿ, ಡೊಣಮೆಣಸಿನಕಾಯಿ, ತುಪ್ಪದ ಹಿರೇಕಾಯಿ, ಚವಳೆಕಾಯಿ, ಸೌತೆಕಾಯಿ ಬೆಲೆ ₹ 2 ಸಾವಿರ, ಈರುಳ್ಳಿ ಹಾಗೂ ‌ಆಲೂಗಡ್ಡೆ ಬೆಲೆ ₹ 1 ಸಾವಿರ ಹೆಚ್ಚಾಗಿದೆ.

ADVERTISEMENT

ಬೆಳ್ಳುಳ್ಳಿ, ಟೊಮೆಟೊ ಬೆಲೆ ಮಾತ್ರ ಸ್ಥಿರವಾಗಿದೆ. ಪ್ರತಿ ಕ್ವಿಂಟಲ್‌ಗೆ ಬೀನ್ಸ್, ತೊಂಡೆಕಾಯಿ ₹ 2 ಸಾವಿರ, ಎಲೆಕೋಸು, ಬದನೆಕಾಯಿ ₹ 1 ಸಾವಿರ ಕಡಿಮೆಯಾಗಿದೆ. ಈ ವಾರ ಗ್ರಾಹಕರಿಗೆ ತರಕಾರಿ ಸುಲಭ ದರದಲ್ಲಿ ದೊರೆಯುತ್ತಿಲ್ಲ.

ನಾಸಿಕ್‌ನಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಬಂದಿದೆ. ಬೆಳಗಾವಿ ಜಿಲ್ಲೆಯಿಂದ ಹಸಿ ಮೆಣಸಿನಕಾಯಿ, ಕೊತ್ತಂಬರಿ, ಮೆಂತೆ ಸೊಪ್ಪು ಆವಕವಾಗಿದೆ. ನೆರೆಯ ತೆಲಂಗಾಣದ ಜಿಲ್ಲೆ ಹಾಗೂ ರಾಯಚೂರು ಗ್ರಾಮೀಣ ಪ್ರದೇಶದಿಂದ ಬದನೆಕಾಯಿ, ತೊಂಡೆಕಾಯಿ, ಹೀರೆಕಾಯಿ, ಗಜ್ಜರಿ, ಸೋರೆಕಾಯಿ, ಸೌತೆಕಾಯಿ, ಎಲೆಕೋಸು, ಹೂಕೋಸು ಇಲ್ಲಿಯ ತರಕಾರಿ ಸಗಟು ಮಾರುಕಟ್ಟೆಗೆ ಆವಕವಾಗಿದೆ.

‘ಬಿಸಿಲಿನ ಝಳ ಹೆಚ್ಚಿರುವ ಕಾರಣ ಬಹುತೇಕ ತರಕಾರಿ ಬೆಳಗಾವಿ ಹಾಗೂ ಮಹಾರಾಷ್ಟ್ರದಿಂದ ಬರುತ್ತಿದೆ. ಸೊಪ್ಪು ಬಹುಬೇಗ ಬಾಡುವ ಕಾರಣ ವ್ಯಾಪಾರಿಗಳು ಸೊಪ್ಪು ಮಾರಾಟಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ರಾಯಚೂರು ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಸೊಪ್ಪು ಬಂದಿದೆ’ ಎಂದು ತರಕಾರಿ ವ್ಯಾಪಾರಿ ರಾಜು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.