ರಾಯಚೂರು: ಬಾನಂಗಳದಲ್ಲಿ ಚಂದಿರ ಬೆಳಂದಿಗಳು ಚೆಲ್ಲುತ್ತಿದ್ದ ಹೊತ್ತಿನಲ್ಲೇ ಬಿಸಿಲ ನಾಡಿನ ನೆಲದಲ್ಲಿ ಅದ್ದೂರಿಯಾಗಿ ನಡೆಯುತ್ತಿದ್ದ ರಾಯಚೂರು ಜಿಲ್ಲಾ ಉತ್ಸವದ ಮುಖ್ಯ ವೇದಿಕೆಗೆ ಶನಿವಾರ ರಾತ್ರಿ ಗಾಯಕ ವಿಜಯ ಪ್ರಕಾಶ್ ಪ್ರವೇಶಿಸುತ್ತಿದ್ದಂತೆಯೇ ವರ್ಣ ರಂಜಿತ ಸಂಗೀತ ಲೋಕ ಅನಾವರಣಗೊಂಡಿತು.
ವಿಜಯ ಪ್ರಕಾಶ್ ಅವರು ಮಧುರ ಗಾನಗಳ ಮೂಲಕ ಶೋತೃಗಳನ್ನು ಸೆಳೆದಿಟ್ಟುಕೊಂಡು ಸಂಗೀತದ ರಸದೌತಣ ನೀಡಿದರು. ಪ್ರೇಮಗೀತೆಗಳು ಯುವ ಸಮೂಹ ಹಾಗೂ ವಯಸ್ಕರನ್ನೂ ರಂಜಿಸಿದವು.
‘ಸಿಂಗಾರ ಸಿರಿಯೇ....’ (ಕಾಂತಾರ), ‘ಬೊಂಬೆ ಹೇಳುತೈತೆ...’ (ರಾಜಕುಮಾರ), ‘ಬೆಳಗೆದ್ದು ಯಾರ ಮುಖವ ನಾನು ನೋಡಿದೆ.....’ (ಕಿರಿಕ್ ಪಾರ್ಟಿ), ‘ಏನಮ್ಮಿ ಏನಮ್ಮಿ...’ (ಮುಗುಳು ನಗೆ) ಹಾಗೂ ‘ಮಾಂಗಲ್ಯಂ ತಂತು ನಾನೇನ’ (ಸೀತಾರಾಮ ಕಲ್ಯಾಣ) ಹಾಡುಗಳು ವಿಜಯ ಪ್ರಕಾಶ್ ಅವರ ಧ್ವನಿಯಲ್ಲೇ ಮೂಡಿಬಂದವು.
ಆಕರ್ಷಕ ನೃತ್ಯ ಪ್ರದರ್ಶನ: ಆಲ್‌ಬಿಕೆ ತಂಡ ಹಾಗೂ ಎಂ.ಜೆ–5 ತಂಡದ ಕಲಾವಿದರು ಆಕರ್ಷಕ ನೃತ್ಯ ಪ್ರದರ್ಶನದ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಯುವಕ, ಯುವತಿಯರು ಸಿಳ್ಳೆ, ಕೇಕೆ ಹಾಕಿ ಕಲಾವಿದರಲ್ಲಿ ಹುರುಪು ತುಂಬಿದರು. ಉಳಿದವರು ಕರಡತಾನದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.
ಇದಕ್ಕೂ ಮೊದಲು ರಾಯಚೂರು ಜಿಲ್ಲೆಯ 48 ಕಲಾವಿದರು ಸಂಗೀತ, ನೃತ್ಯ ಗಾಯನ ಪ್ರಸ್ತುತಪಡಿಸಿದರು.
ಕಲಬುರಗಿಯ ಜೈ ಕುಮಾರ ಮಡಿವಾಳ ಅವರು ಮೂಗಿನಿಂದ ಕೊಳಲು ನುಡಿಸಿದರು. ವಚನ, ತತ್ವಪದ, ಭಕ್ತಿಗೀತೆ, ಸುಗಮ ಸಂಗೀತ, ಹಿಂದೂಸ್ತಾನಿ ಸಂಗೀತ, ಏಕತಾರಿ ಪದ, ವಯಲಿನ್ ವಾದನ, ಭರತನಾಟ್ಯ, ಸಮೂಹ ನೃತ್ಯ ಕಾರ್ಯಕ್ರಮಗಳು ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.