ADVERTISEMENT

ಎಸ್ಸೆಸ್ಸೆಲ್ಸಿ:ಮರುಮೌಲ್ಯಮಾಪನ ಬಳಿಕ ಇಬ್ಬರು ವಿದ್ಯಾರ್ಥಿನಿಯರು ರಾಜ್ಯಕ್ಕೆ ಪ್ರಥಮ

ಮೌಲ್ಯಮಾಪಕರ ಎಡವಟ್ಟು

​ಪ್ರಜಾವಾಣಿ ವಾರ್ತೆ
Published 22 ಮೇ 2019, 14:55 IST
Last Updated 22 ಮೇ 2019, 14:55 IST
ಎಸ್.ಕೆ.ವಿಜಯಲಕ್ಷ್ಮೀ
ಎಸ್.ಕೆ.ವಿಜಯಲಕ್ಷ್ಮೀ   

ಬೆಂಗಳೂರು: ಮೌಲ್ಯಮಾಪಕರ ಎಡವಟ್ಟಿನಿಂದ ಕಡಿಮೆ ಅಂಕ ಪಡೆದಿದ್ದ ಇಬ್ಬರು ಬಾಲಕಿಯರು ಮರುಮೌಲ್ಯ ಮಾಪನದಲ್ಲಿ ಗರಿಷ್ಠ ಅಂಕ ಪಡೆಯುವ ಮೂಲಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ಇನ್ನಿಬ್ಬರು ಬಾಲಕಿಯರೊಂದಿಗೆ ಈ ಸ್ಥಾನ ಹಂಚಿಕೊಂಡಿದ್ದಾರೆ.

ವಿಶೇಷವೆಂದರೆ 625 ಅಂಕಗಳಿಗೆ 625 ಅಂಕಗಳನ್ನು ‍ಪಡೆದ ನಾಲ್ವರೂ ಬಾಲಕಿಯರಾಗಿದ್ದಾರೆ.

ರಾಯಚೂರಿನ ಶಕ್ತಿನಗರದ ಡಿಎವಿ ಪಬ್ಲಿಕ್ ಪ್ರೌಢಶಾಲೆಯ ಎಸ್.ಕೆ.ವಿಜಯಲಕ್ಷ್ಮಿ ಮತ್ತು ಹಾಸನದ ವಿಜಯ ಶಾಲೆಯ ಪ್ರಗತಿ ಎಸ್. ಗೌಡ, ಮರು ಮೌಲ್ಯಮಾಪನದಲ್ಲಿ ಹೆಚ್ಚುವರಿ ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಗಿದಾರರಾಗಿದ್ದಾರೆ.

ADVERTISEMENT

ವಿಜಯಲಕ್ಷ್ಮಿಗೆ ವಿಜ್ಞಾನ ವಿಷಯದಲ್ಲಿ ನೂರಕ್ಕೆ 98 ಅಂಕ ಬಂದಿದ್ದವು.ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ ಬಳಿಕ ಎರಡು ಅಂಕ ಹೆಚ್ಚಿಗೆ ಬಂದಿದ್ದು, ಎಲ್ಲಾ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆದಿದ್ದಾಳೆ ಎಂದು ಶಾಲೆಯ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

ಪ್ರಗತಿ ಎಸ್. ಗೌಡ, ಕನ್ನಡ ವಿಷಯದಲ್ಲಿ 124 ಅಂಕ ಪಡೆದಿದ್ದು, ಮರು ಮೌಲ್ಯಮಾಪನದಲ್ಲಿ ಒಂದು ಅಂಕ ಹೆಚ್ಚು ಗಳಿಸುವುದರೊಂದಿಗೆ ಪ್ರಥಮ ಸ್ಥಾನವನ್ನು ಹಂಚಿಕೊಂಡು ಇತರ ಟಾಪರ್‌ಗಳ ಜತೆ ಮೊದಲ ಸ್ಥಾನ ಹಂಚಿಕೊಂಡಂತಾಗಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದ ದಿನ ಬೆಂಗಳೂರು ನಗರ ಜಿಲ್ಲೆ ಆನೇಕಲ್‌ ತಾಲ್ಲೂಕಿನ ಅತ್ತಿಬೆಲೆಯ ಸೇಂಟ್‌ ಫಿಲೋಮಿನಾ ಶಾಲೆಯ ಸೃಜನ ಮತ್ತು ಉತ್ತರ ಕನ್ನಡ ಜಿಲ್ಲೆ ಕುಮುಟಾದ ಸರಸ್ವತಿ ವಿದ್ಯಾಕೇಂದ್ರ ಪ್ರೌಢಶಾಲೆ ನಾಗಾಂಜಲಿ ನಾಯ್ಕ 625ಕ್ಕೆ 625 ಅಂಕ ಪಡೆದು ಟಾಪರ್‌ ಆಗಿದ್ದರು. ಈಗ ವಿಜಯಲಕ್ಷ್ಮಿ ಮತ್ತು ಪ್ರಗತಿ ಈ ಸಾಲಿಗೆ ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.