ADVERTISEMENT

ಜಾತಿ ಪ್ರಮಾಣ ಪತ್ರ, ನಿವೇಶನ ಹಕ್ಕುಪತ್ರ ನೀಡಲು ಮನವಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2018, 13:09 IST
Last Updated 31 ಜುಲೈ 2018, 13:09 IST
ರಾಯಚೂರಿನಲ್ಲಿ ಕರ್ನಾಟಕ ಜನ ಜಾಗೃತಿ ಸಮಿತಿ ನೇತೃತ್ವದಲ್ಲಿ ಮಾನ್ವಿ ತಾಲ್ಲೂಕು ಪೋತ್ನಾಳ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಿದರು
ರಾಯಚೂರಿನಲ್ಲಿ ಕರ್ನಾಟಕ ಜನ ಜಾಗೃತಿ ಸಮಿತಿ ನೇತೃತ್ವದಲ್ಲಿ ಮಾನ್ವಿ ತಾಲ್ಲೂಕು ಪೋತ್ನಾಳ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಿದರು   

ರಾಯಚೂರು: ಜಿಲ್ಲೆಯ ಮಾನ್ವಿ ತಾಲ್ಲೂಕಿನ ಪೋತ್ನಾಳ ಗ್ರಾಮದಲ್ಲಿ 20 ವರ್ಷಗಳಿಂದ ವಾಸ ಮಾಡುತ್ತಿರುವ ಹಂದಿಜೋಗಿ ಜನಾಂಗದವರಿಗೆ ಜಾತಿ ಪ್ರಮಾಣ ಪತ್ರ ಹಾಗೂ ನಿವೇಶನ ಹಕ್ಕು ಪತ್ರ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಜನ ಜಾಗೃತಿ ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಪಡಿತರ ಚೀಟಿ, ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್‌ಗಳು ಇವೆ. ಆದರೆ, ಜಾತಿ ಪ್ರಮಾಣ ಪತ್ರವಿಲ್ಲ. ಈ ಬಗ್ಗೆ ತಹಶೀಲ್ದಾರರ ಗಮನಕ್ಕೆ ತಂದರೂ, ಯಾವುದೇ ಕ್ರಮ ಜರುಗಿಸಿಲ್ಲ. ಜನಾಂಗದ 20 ಮಕ್ಕಳು ಶಾಲೆಗೆ ಸೇರ್ಪಡೆಗೊಂಡಿದ್ದು, ಈ ಮಕ್ಕಳಿಗೆ ಜಾತಿ ಪ್ರಮಾಣ ಪತ್ರವಿಲ್ಲದ ಕಾರಣ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ದೂರಿದರು.

ಹಳ್ಳದ ದಡದಲ್ಲಿ ವಾಸಿಸುತ್ತಿರುವ ಬಡ ಕುಟುಂಬದವರಿಗೆ ವಸತಿ ಸೌಲಭ್ಯವಿಲ್ಲ. 1993– 94ನೇ ಸಾಲಿನ ನೆರೆಹಾವಳಿಯಿಂದ ವಸತಿಹೀನರಾಗಿದ್ದು, ಕೆಲವರಿಗೆ ಪುನರ್ವಸತಿ ಯೋಜನೆಯಡಿ ಹಕ್ಕುಪತ್ರ ನೀಡಲಾಗಿದೆ. ಉಳಿದವರಿಗೆ ಹಕ್ಕು ಪತ್ರಗಳನ್ನು ನೀಡಿಲ್ಲ. ಆದ್ದರಿಂದ ಗ್ರಾಮದ ಸರ್ವೆ ನಂಬರ್ 175ರಲ್ಲಿ 2 ಎಕರೆ 10 ಗುಂಟೆ ಸರ್ಕಾರಿ ಜಮೀನಿನಲ್ಲಿ ನಿವೇಶನ ಹಕ್ಕು ಪತ್ರ ನೀಡಿ ವಾಸಕ್ಕೆ ಅನುಕೂಲ ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

ಈ ಎರಡು ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ, ಆದಷ್ಟು ಶೀಘ್ರದಲ್ಲಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆ ಅಧ್ಯಕ್ಷ ಯೇಸಪ್ಪ, ಹುಚ್ಚಪ್ಪ ಪೋತ್ನಾಳ, ಪರಶುರಾಮ ಹಾಗೂ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.