ಸಿಂಧನೂರು: ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ 15 ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಮಕ್ಕಳಿಗೆ ಸೋಂಕುಜ್ವರ(ವೈರಲ್ ಫೀವರ್) ಹೆಚ್ಚಾಗಿದ್ದು, ತಪಾಸಣೆ ಮತ್ತು ಚಿಕಿತ್ಸೆಗಾಗಿ ಪೋಷಕರು ಆಸ್ಪತ್ರೆಗಳಿಗೆ ಮುಗಿಬಿದ್ದಿದ್ದಾರೆ.
ನಿರಂತರ ಮಳೆ, ಮೋಡ ಕವಿದ ವಾತಾವರಣ, ಬಿಸಿಲು ಬರುತ್ತಿರುವುದರಿಂದ ಹವಾಮಾನದಲ್ಲಿ ವೈಪರೀತ್ಯದಿಂದಾಗಿ ಮಕ್ಕಳಿಗೆ ಜ್ವರ, ನೆಗಡಿ, ಕೆಮ್ಮು ಕಾಡುತ್ತಿದೆ. ತಾಲ್ಲೂಕಿನಲ್ಲಷ್ಟೇ ಅಲ್ಲ, ಮಸ್ಕಿ, ಮಾನ್ವಿ, ಲಿಂಗಸುಗೂರು, ತಾವರಗೇರಾ, ಕುಷ್ಟಗಿ, ಸಿರಗುಪ್ಪ, ಕಾರಟಗಿ ಮತ್ತಿತರ ತಾಲ್ಲೂಕುಗಳಲ್ಲಿಯೂ ಇದೇ ಸ್ಥಿತಿಯಿದೆ. ವೈದ್ಯರಿಂದ ಚಿಕಿತ್ಸೆ ಪಡೆಯಲು ಚೀಟಿ ಮಾಡಿಸಲು ಆಸ್ಪತ್ರೆಗಳ ಮುಂದೆ ಸಾಲುಗಟ್ಟಿದ್ದಾರೆ.
ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಿದೆ. ಆದರೆ ಪೋಷಕರು ಖಾಸಗಿ ಆಸ್ಪತ್ರೆಗಳ ಮೊರೆ ಹೋಗಿದ್ದಾರೆ. ಚೀಟಿಗೆ ₹ 250, ಮಾತ್ರೆ ಮತ್ತು ಔಷಧಕ್ಕೆ ₹ 500ರಿಂದ ₹ 1000ರವರೆಗೆ ಬಿಲ್ ಮಾಡಲಾಗುತ್ತಿದೆ. ರಕ್ತ ಹಾಗೂ ಮೂತ್ರ ಪರೀಕ್ಷೆಗಾಗಿ ದುಬಾರಿ ಮೊತ್ತ ಭರಿಸಲು ಪಾಲಕರು ತತ್ತರಿಸಿದ್ದಾರೆ.
‘ನಗರದ ಖಾಸಗಿ ಆಸ್ಪತ್ರೆಗಳಲ್ಲಿ ದಿನಕ್ಕೆ 50ರಿಂದ 100 ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿದ್ದರೆ, 500ಕ್ಕೂ ಹೆಚ್ಚು ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಧಿಕ ಜ್ವರದಿಂದ ಬಳಲುತ್ತಿರುವ ಮಕ್ಕಳನ್ನು ದಾಖಲಿಸಲು ಹಾಸಿಗೆ ವ್ಯವಸ್ಥೆಯಿಲ್ಲ. ಹೀಗಾಗಿ ನಿತ್ಯ ಚಿಕಿತ್ಸೆ ಪಡೆದುಕೊಳ್ಳಬೇಕು’ ಎಂದು ವೈದ್ಯರು ಸಲಹೆ ನೀಡುತ್ತಿದ್ದಾರೆ.
ಇತ್ತೀಚೆಗೆ ಹವಾಮಾನ ವೈಪರೀತ್ಯದ ಪರಿಣಾಮವಾಗಿ ಮಕ್ಕಳಲ್ಲಿ ಜ್ವರ ನೆಗಡಿ ಕೆಮ್ಮು ಮತ್ತು ನ್ಯೂಮೋನಿಯಾ ಲಕ್ಷಣಗಳು ವ್ಯಾಪಕವಾಗಿವೆ. ಪಾಲಕರು ತಮ್ಮ ಊರುಗಳಲ್ಲಿಯೇ ಪ್ರಾಥಮಿಕ ಚಿಕಿತ್ಸೆ ಕೊಡಿಸಬೇಕು. ಗುಣಮುಖವಾಗದಿದ್ದರೆ ಸಿಂಧನೂರಿಗೆ ಕರೆದುಕೊಂಡು ಬರಬೇಕುಡಾ.ಕೆ.ಶಿವರಾಜ ಮಕ್ಕಳ ತಜ್ಞ ಸಿಂಧನೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.