ರಾಯಚೂರು: ವಿಶ್ವಕರ್ಮರ ಸಾಧನೆ ಹಾಗೂ ಅವರು ಸಮಾಜಕ್ಕೆ ನೀಡಿದ ಕೊಡುಗೆ ಮಹತ್ವದ್ದಾಗಿದೆ. ಅವರು ತೋರಿಸಿದ ಮಾರ್ಗದಲ್ಲಿ ಸಾಗಬೇಕಾಗಿದೆ’ ಎಂದು ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕಿ ಅಮೃತಾ ಎಸ್.ಚೆನ್ನಾಳ ಹೇಳಿದರು.
ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಯಚೂರು ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
‘ವಿಶ್ವಕರ್ಮ ಸಮಾಜದವರು ನಿರ್ಮಿಸಿದ ಶಿಲ್ಪಕಲೆಗಳು ಈಗಲೂ ಕಣ್ಮನ ಸೆಳೆಯುತ್ತವೆ. ಶಿಲ್ಪ ಕಲೆ ಮಾತ್ರ ಅಲ್ಲ, ಬಂಗಾರದ ಕುಸುರಿ, ಕಬ್ಬಿಣದ ಕೆಲಸಕ್ಕೂ ಇವರು ಎತ್ತಿದ ಕೈ. ಕೆಲಸದಲ್ಲಿ ಇವರಿಗೆ ಇರುವ ತನ್ಮಯತೆ, ಸೂಕ್ಷ್ಮತೆ ಬೇರೆ ಯಾರಿಗೂ ಸಿದ್ಧಿಸದು‘ ಎಂದರು.
ಸಮಾಜ ಮುಖಂಡ ರಾಮು ಅವರು ಮಾತನಾಡಿದರು. ಜಿಲ್ಲಾಧಿಕಾರಿ ಕಚೇರಿಯ ತಹಶೀಲ್ದಾರ್ ಪರಶುರಾಮ, ಸಮಾಜದ ಮುಖಂಡರಾದ ಬ್ರಮ್ಮ ಗಣೇಶ, ಗಿರೀಶ ಆಚಾರಿ, ಡಾ.ವೆಂಕಟೇಶ ಅನ್ವರಿ, ಡಾ.ಮನೋಹರ ವೈ.ಪತ್ತಾರ, ಕಾಳಿಕಾದೇವಿ ದೇವಸ್ಥಾನದ ಸಮಿತಿಯ ಅಧ್ಯಕ್ಷ ಈಶ್ವರ ವಿಶ್ವಕರ್ಮ, ಬ್ರಹ್ಮಯ್ಯ ಉಟಕನೂರು, ಮಾರುತಿ ಬಡಿಗೇರ, ಜಯಂತ ಆಚಾರಿ, ಈರಣ್ಣ ಬಡಿಗೇರ ಉಪಸ್ಥಿತರಿದ್ದರು.
ವಿಶ್ವಕರ್ಮ ಭಾವಚಿತ್ರ ಮೆರವಣಿಗೆಗೆ ನಗರದ ಮಂತ್ರಾಲಯ ರಸ್ತೆಯಲ್ಲಿನ ವಿಶ್ವಕರ್ಮ ವೃತ್ತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಹಾಗೂ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಜಂಟಿಯಾಗಿ ಚಾಲನೆ ನೀಡಿದರು.
ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ನಗರ ಶಾಸಕ ಶಿವರಾಜ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಶರಣಗೌಡ ಪಾಟೀಲ ಬಯ್ಯಾಪುರ, ಎ.ವಸಂತಕುಮಾರ, ಮೇಯರ್ ನರಸಮ್ಮ ಮಾಡಗಿರಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ರಾಯಚೂರು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಪವನಕಿಶೋರ ಪಾಟೀಲ, ಜಿಲ್ಲಾಧಿಕಾರಿ ನಿತೀಶ್ ಕೆ., ಜಿಲ್ಲಾ ಪಂಚಾಯಿಸಿ ಸಿಇಒ ಈಶ್ವರಕುಮಾರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಎಂ, ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಾಪಾತ್, ಸಂಘ ಸಂಸ್ಥೆಗಳ ಪ್ರಮುಖರು, ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.