
ಮಸ್ಕಿ: ದಶಕಗಳ ನಂತರ ಪಟ್ಟಣದ ಭ್ರಮರಾಂಬ–ಮಲ್ಲಿಕಾರ್ಜುನ ಕೃಷಿ ಉತ್ಪನ್ನ ಮಾರುಕಟ್ಟೆ ಹೊಸ ಕಳೆ ಪಡೆದುಕೊಂಡಿದೆ. ಮಾರುಕಟ್ಟೆಯಲ್ಲಿ ಮಳಿಗೆಗಳು ನಿರ್ಮಾಣವಾಗಿದ್ದರೂ ಇಲ್ಲಿನ ವಹಿವಾಟುಗಳು ಸಕ್ರಿಯವಾಗದೆ, ವರ್ತಕರು ಪಟ್ಟಣದ ವಿವಿಧ ಪ್ರದೇಶಗಳಲ್ಲಿ ತಮ್ಮ ವ್ಯಾಪಾರ ಮುಂದುವರಿಸಿಕೊಂಡಿದ್ದರು. ಇದರಿಂದ ಮಾರುಕಟ್ಟೆ ಉದ್ದೇಶಿತ ಲಾಭ ರೈತರಿಗೆ ದೊರೆಯುತ್ತಿರಲಿಲ್ಲ.
ಇದೀಗ ಪರಿಸ್ಥಿತಿ ಬದಲಾಗಿದೆ. ಮಾರುಕಟ್ಟೆ ಲೈಸನ್ಸ್ ಪಡೆದ 40ಕ್ಕೂ ಹೆಚ್ಚು ವರ್ತಕರು ತಮ್ಮ ಹೆಸರಿನಲ್ಲಿರುವ ಕಟ್ಟಡಗಳಲ್ಲಿ ವಹಿವಾಟು ಆರಂಭಿಸಿದ್ದಾರೆ. ಹಿಂದೆ ಮಾರುಕಟ್ಟೆಯ ಮಳಿಗೆಗಳನ್ನು ಖಾಸಗಿ ವ್ಯಕ್ತಿಗಳಿಗೆ ಬಾಡಿಗೆಗೆ ನೀಡಿ ಲಾಭ ಪಡೆಯುತ್ತಿದ್ದ ವರ್ತಕರು, ಮಾರುಕಟ್ಟೆ ಅಧಿಕಾರಿಗಳ ಕಠಿಣ ನಿಲುವಿನ ಹಿನ್ನೆಲೆಯಲ್ಲಿ ತಮ್ಮದೇ ಮಳಿಗೆಗಳಲ್ಲಿ ವ್ಯಾಪಾರ ನಡೆಸಲು ಮುಂದಾಗಿದ್ದಾರೆ.
ಇದರಿಂದ ರೈತರಿಗೆ ನೇರವಾಗಿ ಮಾರುಕಟ್ಟೆಗೆ ಬೆಳೆ ತಂದು ಮಾರಾಟ ಮಾಡುವ ಅವಕಾಶ ಹೆಚ್ಚಾಗಿದೆ. ಸ್ಪರ್ಧಾತ್ಮಕ ವಾತಾವರಣ ನಿರ್ಮಾಣವಾಗಿದ್ದು, ಬೆಲೆ ನಿರ್ಧಾರದಲ್ಲಿ ಪಾರದರ್ಶಕತೆ ಹೆಚ್ಚಾಗಿದೆ ಎಂಬ ಅಭಿಪ್ರಾಯ ರೈತರಿಂದ ವ್ಯಕ್ತವಾಗಿದೆ. ಮಾರುಕಟ್ಟೆ ಆವರಣದಲ್ಲಿ ಚಟುವಟಿಕೆಗಳು ಹೆಚ್ಚಾಗಿ, ಕಾರ್ಮಿಕರಿಗೆ ಉದ್ಯೋಗಾವಕಾಶವೂ ಲಭ್ಯವಾಗಿದೆ.
ಸ್ವತಂತ್ರ ಮಾರುಕಟ್ಟೆಯಾದ ಎಪಿಎಂಸಿ: ಮಸ್ಕಿಯ ಕೃಷಿ ಉತ್ಪನ್ನ ಮಾರುಕಟ್ಟೆ ಇದೀಗ ಸ್ವತಂತ್ರ ಮಾರುಕಟ್ಟೆಯಾಗಿ ಹೊರಹೊಮ್ಮಿದೆ. ಹಿಂದೆ ಲಿಂಗಸುಗೂರು ಕೃಷಿ ಮಾರುಕಟ್ಟೆಗೆ ಒಳಪಟ್ಟಿದ್ದ ಇದು, ತಾಲ್ಲೂಕಿನಲ್ಲಿ ಹೆಚ್ಚು ವರಮಾನ ನೀಡುವ ಮಾರುಕಟ್ಟೆ ಎಂಬ ಹೆಗ್ಗಳಿಕೆ ಪಡೆದಿತ್ತು. ಸ್ವತಂತ್ರ ಮಾರುಕಟ್ಟೆಯಾಗಿ ವರ್ಷ ಕಳೆದರೂ ಸರ್ಕಾರ ಇನ್ನೂ ಆಡಳಿತ ಮಂಡಳಿಯನ್ನು ರಚಿಸಿಲ್ಲ. ನೇಮಕಾತಿಗೆ ತೀವ್ರ ಪೈಪೋಟಿ ಇರುವುದರಿಂದ, ಶಾಸಕ ಆರ್. ಬಸನಗೌಡ ತುರ್ವಿಹಾಳ ಅವರಿಗೆ ಇದು ಸವಾಲಾಗಿ ಪರಿಣಮಿಸಿದೆ.
Highlights - ಅಧಿಕಾರಿಗಳ ಕಟ್ಟುನಿಟ್ಟಿನ ಕ್ರಮ ಖಾಲಿ ಮಳಿಗೆಗಳಿಗೆ ಜೀವ ರೈತರಿಗೆ ನೇರ ಮಾರಾಟ
ವರ್ತಕರನ್ನು ಮನವೊಲಿಸಿ ಎಪಿಎಂಸಿಯಲ್ಲಿ ವಹಿವಾಟು ಆರಂಭಿಸುವಂತೆ ಮಾಡಲಾಗಿದೆ. ಇನ್ನೂ ಕೆಲವು ವರ್ತಕರಿಗೆ ನಿವೇಶನಗಳು ಮುಂಜೂರಾಗಿಲ್ಲ. ಅಧಿಕಾರಿಗಳು ಶೀಘ್ರವಾಗಿ ನಿವೇಶನ ಹಂಚಿಕೆಗೆ ಮುಂದಾಗಬೇಕುಆದಯ್ಯಸ್ವಾಮಿ ಕ್ಯಾತನಟ್ಟಿ ಅಧ್ಯಕ್ಷರು ವರ್ತಕರ ಸಂಘ ಮಸ್ಕಿ
₹ 45 ಲಕ್ಷ ಶುಲ್ಕ ಸಂಗ್ರಹ: ಕಾರ್ಯದರ್ಶಿ ಮಸ್ಕಿ ಕೃಷಿ ಮಾರುಕಟ್ಟೆಯಿಂದ 2025-26ರಲ್ಲಿ ಮಾರುಕಟ್ಟೆ ಶುಲ್ಕ ₹ 15 ಲಕ್ಷವನ್ನು ಸರ್ಕಾರ ನಿಗದಿಮಾಡಿತ್ತು. ನಾವು ₹45 ಲಕ್ಷ ಶುಲ್ಕ ಸಂಗ್ರಹ ಮಾಡಿದ್ದೇವೆ. ರೈತರು ಹಾಗೂ ವರ್ತಕರ ಮನವೊಲಿಕೆಯಿಂದ ಕೃಷಿ ಮಾರುಕಟ್ಟೆಗೆ ವ್ಯವಹಾರ ಸ್ಥಳಾಂತರಗೊಂಡಿದ್ದರಿಂದ ಇದು ಸಾಧ್ಯವಾಗಿದೆ. ವರ್ತಕರಿಗೆ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಮಸ್ಕಿ ಎಪಿಎಂಸಿ ಕಾರ್ಯದರ್ಶಿ ಇಸ್ಮಾಯಿಲ್ ಸಾಬ್ ಬಾಳನವರ್ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.