ADVERTISEMENT

ಕೆಲಸ ಅರಸಿ ಗುಳೆ ಹೊರಟ ಜನ

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ಕೆಲಸ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಜುಲೈ 2021, 5:08 IST
Last Updated 4 ಜುಲೈ 2021, 5:08 IST
ಜಾಲಹಳ್ಳಿ ಪಟ್ಟಣದ ಸಾರಿಗೆ ಸಂಸ್ಥೆಯ ನಿಲ್ದಾಣದಲ್ಲಿ ಜನತೆ ಕೆಲಸ ಅರಿಸಿ ಗುಳೆ ಹೊರಟಿರುವುದು
ಜಾಲಹಳ್ಳಿ ಪಟ್ಟಣದ ಸಾರಿಗೆ ಸಂಸ್ಥೆಯ ನಿಲ್ದಾಣದಲ್ಲಿ ಜನತೆ ಕೆಲಸ ಅರಿಸಿ ಗುಳೆ ಹೊರಟಿರುವುದು   

ಜಾಲಹಳ್ಳಿ: ಪ್ರಸಕ್ತ ವರ್ಷ ಮುಂಗಾರು ಮಳೆ ಉತ್ತಮವಾಗಿದೆ. ರೈತರು ತಮ್ಮ ಜಮೀನುಗಳಲ್ಲಿ ವಿವಿಧ ಬೆಳೆ ಬೆಳೆಯಲು ಬಿತ್ತನೆ ಕಾರ್ಯಕೈಗೊಂಡಿದ್ದಾರೆ. ಆದರೆ, ಕೂಲಿ ಕಾರ್ಮಿಕರು ಬೆಂಗಳೂರು ನಗರಕ್ಕೆ ಕೆಲಸ ಅರಸಿ ಗುಳೆ ಹೊರಟ ದೃಶ್ಯ ಶನಿವಾರ ಇಲ್ಲಿನ ಬಸ್ ನಿಲ್ದಾಣದಲ್ಲಿ ಕಂಡುಬಂತು.

ನಿಂಗಪ್ಪ ಕೂಲಿ ಕಾರ್ಮಿಕ ‘ಪ್ರಜಾವಾಣಿ‘ಯೊಂದಿಗೆ ಮಾತನಾಡಿ, ಈ ಹಿಂದೆ ಕೂಡ ನಾವು ಬೆಂಗಳೂರು ನಗರದಲ್ಲಿಯೇ ಗಾರೆ ಕೆಲಸ ಮಾಡುತ್ತಿದ್ದೆವು. ಲಾಕ್‌ಡೌನ್ ಮಾಡಿದ ನಂತರ ನಮ್ಮ ಗ್ರಾಮಕ್ಕೆ ಬಂದಿದ್ದೇವು. ಆದರೆ, ಗ್ರಾಮೀಣ ಪ್ರದೇಶದಲ್ಲಿ ನಿತ್ಯ ಕೆಲಸ ಸಿಗುವುದಿಲ್ಲ. ಒಂದು, ಎರಡು ದಿನ ಮಾತ್ರ ಕೆಲಸಕ್ಕೆ ಕರೆಯುತ್ತಿದ್ದಾರೆ. ನಂತರ ಏನು ಮಾಡಬೇಕು. ಇದೇ ತರಹ ಕಳೆದ ಮೂರು ತಿಂಗಳಿಂದ ಮನೆಯಲ್ಲಿಯೇ ಕೆಲಸ ಇಲ್ಲದೇ ಕುಳಿತು ಜೀವನ ನಡೆಸುವುದೇ ಕಷ್ಟವಾಗಿದೆ. ತುತ್ತಿನ ಚೀಲ ತುಂಬಿಸಿಕೊಳ್ಳಲು ಮಡದಿ, ಮಕ್ಕಳೊಂದಿಗೆ ಗುಳೆ ಹೊರಟ್ಟಿದ್ದೇನೆ‘ ಎಂದು ತಿಳಿಸಿದರು.

ಕೆಲಸವಿಲ್ಲದೇ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಅನೇಕ ಕುಟುಂಬಗಳು ಉದ್ಯೋಗ ಅರಿಸಿ ದೊಡ್ಡ ದೊಡ್ಡ ನಗರಗಳತ್ತ ಮುಖ ಮಾಡಿವೆ. ಸರ್ಕಾರದ ಯೋಜನೆಗಳು ಜಾರಿಯಾಗದೇ ಇರುವುದರಿಂದ ಬಡವರ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ. ಜಾಲಹಳ್ಳಿ ಗ್ರಾಮ ಪಂಚಾಯಿತಿ ಈಚೆಗೆ ಮೇಲ್ದರ್ಜೆಗೆ ಏರಿಸಿರುವುದರಿಂದ ಉದ್ಯೋಗ ಖಾತ್ರಿ ಯೋಜನೆ ರದ್ದು ಪಡಿಸಲಾಗಿದೆ.

ADVERTISEMENT

ಕರಡಿಗುಡ್ಡ, ಚಿಂಚೋಡಿ ಗ್ರಾಮ ಪಂಚಾಯಿತಿಗಳಿಗೂ ಕೂಡ ಚುನಾವಣೆ ನಡೆಯದೇ ಸ್ಥಗಿತಗೊಳಿಸಲಾಗಿದೆ. ಅಲ್ಲಿಯು ಕೂಡ ಆಡಳಿತ ಮಂಡಳಿ ಇಲ್ಲದೇ ಜನತೆ ನಿತ್ಯ ಸಮಸ್ಯೆ ಅನುಭವಿಸುವಂತಾಗಿದೆ.

‘ದುಡಿಯುವ ಕೈಗಳಿಗೆ ಕೆಲಸ ಕೊಡಬೇಕೆನ್ನುವ ನಿಯಮ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಇದ್ದರೂ ಕೆಲ ಅಧಿಕಾರಿಗಳ ನಿಷ್ಕಾಳಜಿ, ಪ್ರತಿನಿಧಿಗಳ ಆಟಾಟೋಪಕ್ಕೆ ಕೂಲಿಕಾರ್ಮಿಕರು ನಲುಗಿ ಹೋಗಿದ್ದಾರೆ. ತಕ್ಷಣವೇ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡು ಜನತೆ ಕೆಲಸ ನೀಡಬೇಕು‘ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನರಸಣ್ಣ ನಾಯಕ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.