ಸಿಂಧನೂರು: ಯಾವುದೇ ಕಾಲವಿರಲಿ ತಾಲ್ಲೂಕಿನ ಗಡಿ ಗ್ರಾಮಗಳ ಜನರಿಗೆ ಕುಡಿಯುವ ನೀರಿನದ್ದೇ ದೊಡ್ಡ ಚಿಂತೆ. ನಿತ್ಯವೂ ಕುಡಿಯುವ ನೀರಿಗಾಗಿ ಪರಿತಪಿಸುತ್ತಾರೆ.
ತಾಲ್ಲೂಕು ವ್ಯಾಪ್ತಿಯ ಮಳೆಯಾಶ್ರಿತ ಗ್ರಾಮಗಳಾದ ಮಾಂಪುರ, ಬೋಗಾಪುರ, ಚಿಕ್ಕಬೇರಿಗಿ, ಹಿರೇಬೇರಿಗಿ, ಹತ್ತಿಗುಡ್ಡ, ರತ್ನಾಪುರ ಹಟ್ಟಿ, ಬೊಮ್ಮನಾಳ, ಗಂಟೇರಹಟ್ಟಿ, ಹೀರಾಪುರ, ಕರಡಚಿಲುಮಿ, ಗೊರಲೂಟಿ, ಉಮಲೂಟಿ, ಕಲ್ಮಂಗಿ ಸೇರಿದಂತೆ ಮತ್ತಿತರ ಗಡಿ ಗ್ರಾಮಗಳನ್ನು ತಾಲ್ಲೂಕು ಆಡಳಿತ ಸಂಪೂರ್ಣ ನಿರ್ಲಕ್ಷ್ಯ ಮಾಡಿರುವುದರಿಂದ ಇಲ್ಲಿನ ಜನ, ಜಾನುವಾರುಗಳು ಬಿಸಿಲಿಗೆ ತತ್ತರಿಸಿವೆ.
ಈ ಭಾಗದಲ್ಲಿ ಹೆಚ್ಚು ಕುರಿಗಾಹಿಗಳಿದ್ದು ಹಳ್ಳ-ಕೆರೆ-ಕುಂಟೆಗಳು ಬತ್ತಿ ಹೋಗಿರುವುದರಿಂದ ಅನಿವಾರ್ಯವಾಗಿ ನಳ ಇಲ್ಲವೇ ಬೋರ್‌ವೆಲ್ ನೀರನ್ನೇ ಅವಲಂಬಿಸಿದ್ದಾರೆ. ಕುರಿ ಮತ್ತು ಆಡುಗಳಿಗೆ ದಿನವೂ ಎರಡು ಬಾರಿ ನೀರು ಕುಡಿಸಲು ಹರಸಾಹಪಡುತ್ತಿದ್ದಾರೆ.
‘ನಮ್ ಊರಾಗ 6 ಕೈ ಬೋರ್‌ಗಳು ಅದಾವ್ರಿ. ನಾಲ್ಕು ಕೆಟ್ಟು ಹೋಗ್ಯಾವ. ಎರಡು ಬೇಸ್ ಅದ್ಯಾವ, ಒಂದ್ರಾಗ ಉಪ್ಪು ನೀರು ಬರ್ತೈತಿ, ಇನ್ನೊಂದ್ರಾಗ ಸಿಹಿ ನೀರು ಬರ್ತೈತಿ. ಆದ್ರ ನಾಕಾರು ದಿನ ಆಯ್ತು ಸಿಹಿ ನೀರಿನ ಬೋರ್ನಾಗ ಹೊಂಡು ಬೀಳಾಕತ್ತೈತಿ. ಈ ಬ್ಯಾಸಿಗಿ ಮುಗದು ಯಾವಾಗ ಮಳಿ ಶುರುವಾಗತ್ತ ಅನಂಗ ಆಗೇತ್ರಿ’ ಎಂದು ಕಲ್ಮಂಗಿ ಗ್ರಾಮದ ದುರಗಮ್ಮ ಅಳಲು ತೋಡಿಕೊಂಡರು.
‘ಕಲ್ಮಂಗಿ ಪಂಚಾಯಿತಿ ವ್ಯಾಪ್ತಿಗೆ ಬರುವ ಹಿರೇಬೇರಿಗಿ, ಚಿಕ್ಕಬೇರಿಗಿ ಹಾಗೂ ಹತ್ತಿಗುಡ್ಡ ಗ್ರಾಮಗಳಿಗೆ ತುಂಗಭದ್ರಾ ಎಡದಂಡೆ ನಾಲೆಯಿಂದ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ನಾಲ್ಕಾರು ವರ್ಷಗಳ ಹಿಂದೆಯೇ ಪೈಪ್‍ಲೈನ್ ಮಾಡಿದ್ದಾರೆ. ಆದರೆ ಇಲ್ಲಿಯವರೆಗೂ ನಮ್ಮೂರಿಗೆ ಕಾಲುವೆಯಿಂದ ಹನಿ ನೀರು ಬಂದಿಲ್ಲ. ದಿನಾಲೂ ನಳದಾಗ ಬರುವ ಉಪ್ಪು ನೀರು ಕುಡಿತೀವಿ. ಆ ನೀರನ್ನೇ ದನಗಳು ಕುಡ್ಯಾಕ ಹಿಂದು-ಮುಂದು ನೋಡ್ತಾವ. ಮನುಷ್ಯ ಕುಡಿದರೆ ಕೀಲು ಬೇನೆ ಬರತೈತಿ. ಬ್ಯಾಸಗಿ ಬಂತಂದ್ರ ನಮ್ ಊರ್ ಮಂದಿಗೆ ಜೀವ ಝಲ್ಲಂತದ ರೀ. ಕುಡ್ಯಾಕ ಒಂದಿಷ್ಟು ಚಲೋ ನೀರು ಕೊಡ್ತಿಲ್ಲ ಈ ಪಂಚಾಯಿತಿ ಮಂದಿ’ ಎಂದು ಗ್ರಾಮದ ಯಲ್ಲಮ್ಮ ಅಧಿಕಾರಿಗಳಿಗೆ ಶಾಪ ಹಾಕಿದರರು.
‘ನಮ್ಮ ಕಲ್ಮಂಗಿ ಗ್ರಾಮದಲ್ಲಿ 2,400 ಜನ ಇದ್ದಾರೆ. ಒಂದೇ ಒಂದು ಕುಡಿಯುವ ನೀರಿನ ಘಟಕ ಇದೆ. ಈ ನೀರು ಸಾಕಾಗುವುದಿಲ್ಲ. ಇನ್ನೊಂದು ಆರ್‌ಒ ಪ್ಲಾಂಟ್ ಹಾಕುವಂತೆ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿ ಗಮನಕ್ಕೆ ಸಾಕಷ್ಟು ಬಾರಿ ತಂದರೂ ಏನೂ ಪ್ರಯೋಜನ ಆಗಿಲ್ಲ’ ಎಂದು ಕಾರ್ಮಿಕ ಮುಖಂಡ ಆರ್.ಎಚ್.ಕಲಮಂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿರುವ ಎಲ್ಲ ಕೆರೆಗಳಲ್ಲೂ ಸದ್ಯ ಶೇ60 ರಿಂದ ಶೇ80 ರಷ್ಟು ನೀರು ಸಂಗ್ರಹವಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹೇಳುತ್ತಾರಾದರೂ ವಾಸ್ತವದಲ್ಲಿ ಹಳ್ಳಿ ಮತ್ತು ಕ್ಯಾಂಪ್‍ಗಳಲ್ಲಿ ಕೊಡ ಹಿಡಿದುಕೊಂಡು ನೀರಿಗಾಗಿ ಅಲೆದಾಟ ನಡೆಸುವದಂತೂ ತಪ್ಪಿಲ್ಲ.
ಶಾಸಕರು, ವಿಧಾನ ಪರಿಷತ್ ಸದಸ್ಯರು, ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಎಚ್ಚೆತ್ತುಕೊಂಡು ಗ್ರಾಮಗಳಲ್ಲಿರುವ ಕುಡಿಯುವ ನೀರಿನ ಸಮಸ್ಯೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಐಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ಬಾಷುಮಿಯಾ ಹಾಗೂ ಹಮಾಲರ ಸಂಘದ ಗೌರವ ಅಧ್ಯಕ್ಷ ವೆಂಕನಗೌಡ ಗದ್ರಟಗಿ ಆಗ್ರಹಿಸಿದ್ದಾರೆ.
ಏತಂತಾರೆ ಜನ?
ತಾಲ್ಲೂಕಿನ ಗಡಿ ಗ್ರಾಮಗಳ ಜನ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಅದರಲ್ಲೂ ಜಾನುವಾರಿಗೆ ನೀರು ಹೊಂದಿಸುವುದು ರೈತಾಪಿ ಜನರಿಗೆ ಕಷ್ಟವಾಗಿದೆ. ತಾಲ್ಲೂಕು ಆಡಳಿತ ಗಂಭೀರವಾಗಿ ಪರಿಗಣಿಸಬೇಕು - ರಮೇಶ ಪಾಟೀಲ ಬೇರಿಗಿ, ತಾಲ್ಲೂಕು ಘಟಕದ ಅಧ್ಯಕ್ಷ ಕರ್ನಾಟಕ ರೈತ ಸಂಘ
ಈ ಬಿಸಲಾಗ ಮನುಷ್ಯರಿಗೆ ಕುಡ್ಯಾಕ ನೀರು ಸಿಗವಲ್ತು. ಇನ್ನು ಆಡು ಕುರಿ ದನಗಳಿಗೆ ನೀರು ಕುಡಿಸ್ಬೇಕು ಅಂದ್ರ ಎಲ್ಲಿ ಐತಪ್ಪೋ ಅಂತ ಹುಡ್ಕೊಂಡು ಹೋಗೋ ಪರಿಸ್ಥಿತಿ ಬಂದೈತಿ - ಬೀರಪ್ಪ, ಕುರಿಗಾಹಿ ಕುರುಕುಂದಾ
ಕುಡಿಯುವ ನೀರಿಗೆ ತೀವ್ರ ಸ್ವರೂಪದ ತೊಂದರೆಯಾಗಿಲ್ಲ. ಆದರೆ ಪೂರೈಕೆ ಕಡಿಮೆಯಾಗಿದೆ. ಕೆಲ ದಿನಗಳಲ್ಲಿ ತುರ್ವಿಹಾಳ ಕೆರೆಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ನಂತರ ಸಮಸ್ಯೆ ನಿವಾರಣೆಯಾಗಲಿದೆ - ಚಂದ್ರಶೇಖರ, ತಾಪಂ ಇಒ
ತಾಲ್ಲೂಕಿನ ಗಡಿ ಭಾಗದಲ್ಲಿ ಕುಡಿಯುವ ನೀರಿನ ಯಾವುದೇ ತೊಂದರೆ ಕಂಡು ಬಂದಿಲ್ಲ. ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು - ವಿಜಯಲಕ್ಷ್ಮಿ, ಎಇಇ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.