ADVERTISEMENT

ನೀರಿಗಾಗಿ ಬೀದಿಗೆ ಬಂದ ಕಾರ್ಮಿಕರ ಕುಟುಂಬ!

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 14:43 IST
Last Updated 9 ಏಪ್ರಿಲ್ 2019, 14:43 IST
ಹಟ್ಟಿಚಿನ್ನದ ಗಣಿ ಕ್ಯಾಂಪ್ ಪ್ರದೇಶದ ಕಾರ್ಮಿಕರ ಕುಟುಂಬಗಳ ಸದಸ್ಯರು ಕಾಲೊನಿಗಳಿಗೆ ಗಣಿ ಕಂಪನಿಯ ನೀರು ಒದಗಿಸಲು ಒತ್ತಾಯಿಸಿ ಖಾಲಿಕೊಡಗಳ ಸಮೇತ ಆಗಮಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು
ಹಟ್ಟಿಚಿನ್ನದ ಗಣಿ ಕ್ಯಾಂಪ್ ಪ್ರದೇಶದ ಕಾರ್ಮಿಕರ ಕುಟುಂಬಗಳ ಸದಸ್ಯರು ಕಾಲೊನಿಗಳಿಗೆ ಗಣಿ ಕಂಪನಿಯ ನೀರು ಒದಗಿಸಲು ಒತ್ತಾಯಿಸಿ ಖಾಲಿಕೊಡಗಳ ಸಮೇತ ಆಗಮಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು   

ಹಟ್ಟಿಚಿನ್ನದಗಣಿ: ಸ್ಥಳೀಯ ಚಿನ್ನದಗಣಿ ಕಂಪನಿ ವ್ಯಾಪ್ತಿಯ ಕಾರ್ಮಿಕರು ವಾಸಿಸುವ ಕಾಲೊನಿಗಳಲ್ಲಿ ಈಚೆಗೆ ನೀರು ಪೂರೈಕೆ ಅಸ್ತವ್ಯಸ್ತಗೊಂಡಿದೆ. ಈ ಬಗ್ಗೆ ಕಾರ್ಮಿಕರ ಕುಟುಂಬಗಳು ರೋಸಿ ಹೋಗಿದ್ದು ಕಾಲೊನಿಗಳ ಮಹಿಳೆಯರು ಕೊಡಗಳ ಸಹಿತ ಗಣಿ ಕಂಪನಿ ಮುಖ್ಯದ್ವಾರಕ್ಕೆ ಸೋಮವಾರ ಆಗಮಿಸಿ ಸಮರ್ಪಕ ನೀರು ಪೂರೈಕೆಗೆ ಒತ್ತಾಯಿಸಿದ್ದು ನಡೆಯಿತು.

ಐದು ದಶಕಗಳ ಹಿಂದೆ ಅಳವಡಿಸಲಾದ ಪೈಪ್‌ಲೈನ್‌ಗಳು ಜಾಮ್‌ಗೊಂಡು ಮನೆಗಳ ನಲ್ಲಿಗೆ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ನಿವಾಸಿಗಳು ನೀರಿಗಾಗಿ ತೊಂದರೆ ಪಡುವಂತಾಗಿದೆ. ಕ್ಯಾಂಪ್ ಪ್ರದೇಶದ ಗಾಂಧಿ ಮೈದಾನ ಕಾಲೊನಿ, ಜತ್ತಿ ಕಾಲೊನಿ, ಜಿಆರ್ ಕಾಲೊನಿ ಸೇರಿದಂತೆ ಇತರ ಕಾಲೊನಿಗಳಲ್ಲಿ ವಾಸಿಸುವ ಕಾರ್ಮಿಕ ಮನೆಗಳ ನಲ್ಲಿಗಳಿಗೆ ಕಳೆದ ಹಲವು ತಿಂಗಳುಗಳಿಂದ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ.

ಆಡಳಿತವರ್ಗದಿಂದ ನಿರ್ಲಕ್ಷ್ಯ : ಕಾರ್ಮಿಕರು ವಾಸಿಸುವ ಕಾಲೊನಿಗಳಲ್ಲಿ ನೀರಿನ ಸಮಸ್ಯೆ ಜತೆಯಲ್ಲಿ ಹಲವು ಕಾಲೊನಿಗಳ ರಸ್ತೆಗಳು ಸಹ ಹದಗೆಟ್ಟು ಹೋಗಿದೆ. ಆದರೂ ಗಣಿ ಆಡಳಿತ ವರ್ಗ ನಿರ್ಲಕ್ಷ್ಯ ವಹಿಸಿದೆ. ಗಣಿ ಕಂಪನಿಯಲ್ಲಿ ದುಡಿಯುವ ಕಾರ್ಮಿಕರಿಗೆ ಅವರು ವಾಸಿಸುವ ಕಾಲೊನಿಗಳಿಗೆ ನೀರು, ರಸ್ತೆ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕಾಗಿರುವುದು ಗಣಿ ಕಂಪನಿಯ ಆದ್ಯ ಕರ್ತವ್ಯ. ವಿಪರ್ಯಾಸವೆಂದರೆ ಬೇರೆ ಬೇರೆ ಕಡೆ ಧಾರಳವಾಗಿ ಹಣ ಖರ್ಚು ಮಾಡುತ್ತಿರುವ ಗಣಿ ಕಂಪನಿಯು, ಕಾರ್ಮಿಕರು ವಾಸಿಸುವ ಕಾಲೊನಿಗಳಿಗೆ ಸರಿಯಾದ ನೀರಿನ ವ್ಯವಸ್ಥೆ ಮಾಡುತ್ತಿಲ್ಲವೆಂದು ಮಹಿಳೆಯರು ದೂರಿದರು.

ADVERTISEMENT

ಸ್ಥಳಕ್ಕೆ ಆಗಮಿಸಿದ ಪ್ರಭಾರಿ ಹಿರಿಯ ವ್ಯವಸ್ಥಾಪಕ(ಮಾಸ) ಯಮನೂರಪ್ಪ, ಹೌಸಿಂಗ್ ಅಧಿಕಾರಿ ರಮೇಶ, ಖಾಲಿ ಕೊಡಗಳನ್ನು ತೆಗೆದುಕೊಂಡು ಮುಖ್ಯದ್ವಾರಕ್ಕೆ ಬಂದಿದ್ದ ಮಹಿಳೆರ ಜತೆ ಮಾತನಾಡಿ, ಕೃಷ್ಣಾ ನದಿಯಲ್ಲಿ ನೀರಿನ ಇಳಿಕೆಯಾಗಿದ್ದರಿಂದ ಸಮಸ್ಯೆಯಾಗಿದೆ. ನಿಮ್ಮ ಕಾಲೊನಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದೆಂಬ ಭರವಸೆ ನೀಡಿದ ನಂತರ ಮಹಿಳೆರು ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.