ADVERTISEMENT

ಸಿಂಧನೂರು: ಪತಿ ಅರಸಿ ಬಂದ ಪತ್ನಿಗೆ ಥಳಿತ, ದೂರು ದಾಕಲು

​ಪ್ರಜಾವಾಣಿ ವಾರ್ತೆ
Published 3 ಜೂನ್ 2022, 4:43 IST
Last Updated 3 ಜೂನ್ 2022, 4:43 IST

ಸಿಂಧನೂರು (ರಾಯಚೂರು ಜಿಲ್ಲೆ): ಪ್ರೀತಿಸಿ ಮದುವೆಯಾಗಿ ಮಗು ಜನಿಸಿದ ಬಳಿಕ ಪತಿ ವಂಚಿಸಿ ಪರಾರಿಯಾದ ಎಂದು ಆರೋಪಿಸಿ ತುಮಕೂರು ಜಿಲ್ಲೆಯ ಮಹಿಳೆಯೊಬ್ಬರು, ತುರ್ವಿಹಾಳ ಪೊಲೀಸ್ ಠಾಣೆಗೆ ಗುರುವಾರ ದೂರು ನೀಡಿದ್ದಾರೆ.

ತಾಲ್ಲೂಕಿನ ನಿಡಿಗೋಳ ಗ್ರಾಮದ ಯಂಕನಗೌಡ ಕರೇಗೌಡ ವಂಚಿಸಿದ ಆರೋಪಿ ಎಂದು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಗ್ರಾಮದ ಮಹಿಳೆ ದೂರು ಕೊಟ್ಟಿದ್ದಾರೆ.

‘ಬೆಂಗಳೂರಿನ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಇಬ್ಬರಿಗೂ ಪರಿಚಯವಾಗಿತ್ತು. ಯಂಕನಗೌಡ ತನ್ನ ಜನ್ಮ ದಿನದ ನೆಪದಲ್ಲಿ ಕೊಠಡಿಗೆ ಕರೆಯಿಸಿ ಅತ್ಯಾಚಾರ ಎಸಗಿ, ಅದನ್ನು ಚಿತ್ರೀಕರಿಸಿ ಬೆದರಿಕೆ ಹಾಕಿದ್ದ. ಜತೆಗೆ ಹಲವು ಸಲ ಅತ್ಯಾಚಾವೆಸಗಿದ’ ಎಂದು ಹೇಳಿದ್ದಾರೆ.

ADVERTISEMENT

‘ಗರ್ಭವತಿ ಆಗುತ್ತಿದ್ದಂತೆ ನನ್ನನ್ನು ಬಿಟ್ಟು ಹೋಗಲು ಆರೋಪಿ ಯತ್ನಿಸಿದ. ಪೋಷಕರಿಗೆ ತಿಳಿಸುವುದಾಗಿ ಹೇಳಿದ ಬಳಿಕ ಬೆಂಗಳೂರಿನ ಸಿದ್ದಾಪುರದ ಶಿವನ ದೇವಸ್ಥಾನದಲ್ಲಿ ಮದುವೆಯಾದ. ಮಗು ಜನಿಸಿದ 6 ತಿಂಗಳ ನಂತರ ‘ನನ್ನ ತಂದೆಗೆ ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆ ಇದೆ’ ಎಂದು ಹೇಳಿ ಹೋದವ ಮರಳಿ ಬರಲಿಲ್ಲ. ಫೋನ್ ಸ್ವಿಚ್ ಆಫ್ ಇರುತಿತ್ತು. ನಿಡಿಗೋಳಗೆ ಹಲವು ಸಲ ಬಂದರೂ ಯಂಕನಗೌಡ ಸಿಗಲಿಲ್ಲ. ತುರ್ವಿಹಾಳ ಪೊಲೀಸ್ ಠಾಣೆಗೆ ಮೊರೆ ಹೋದಾಗ, ದೂರು ದಾಖಲಿಸಿಕೊಳ್ಳಲಿಲ್ಲ’ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

‘ಪೊಲೀಸರು ಮದುವೆಯಾದ ದಾಖಲೆ ಕೇಳಿದರು. ಆದರೆ, ಹೆರಿಗೆ ವೇಳೆ ನನ್ನ ಮೊಬೈಲ್‍ನಲ್ಲಿ ಇದ್ದ ಮದುವೆ‌ ಚಿತ್ರ, ಮಾತುಕತೆಯ ದಾಖಲೆಗಳನ್ನು ಅಳಿಸಿಹಾಕಿದ್ದು ಗೊತ್ತಾಗಿದೆ‘ ಎಂದು ತಿಳಿಸಿದ್ದಾರೆ.

‘ಹಲವು ದಿನಗಳ ನಂತರ ನಿಡಿಗೋಳ ಗ್ರಾಮಕ್ಕೆ ಯಂಕನಗೌಡ ಬಂದಿದ್ದ ಎಂಬುದು ತಿಳಿದು ಬುಧವಾರ ಸಂಜೆ ಮಗು ಮತ್ತು ತಾಯಿಯನ್ನು ಕರೆದುಕೊಂಡು ಮನೆಗೆ ಹೋಗಿದ್ದೆ. ಆಗ ಯಂಕನಗೌಡ ಕುಟುಂಬಸ್ಥರು ಜಾತಿ ನಿಂದನೆ ಮಾಡಿ, ಥಳಿಸಿದ್ದಾರೆ‘ ಎಂದು ಮಹಿಳೆ ಆರೋಪಿಸಿದ್ದಾರೆ. ಸದ್ಯ ಮಹಿಳೆಯು ಸಿಂಧನೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.