ರಾಯಚೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಯಚೂರು ಬೈಸಿಕಲ್ ಕ್ಲಬ್‌ನ ಸಹಯೋಗದೊಂದಿಗೆ ಫಿಟ್ ಇಂಡಿಯಾ ಕಾರ್ಯಕ್ರಮದಡಿ ವಿಶ್ವ ಬೈಸಿಕಲ್ ದಿನಾಚರಣೆಯ ಅಂಗವಾಗಿ ತಿರಂಗಾ ಸೈಕಲ್ ಜಾಥಾ ನಡೆಯಿತು.
ಇಲ್ಲಿಯ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಜಾಥಾಕ್ಕೆ ಚಾಲನೆ ನೀಡಿದರು. ಸೈಕಲ್ ಸವಾರಿ ಮಾಡಿ ಜಾಥಾದಲ್ಲಿ ಭಾಗವಹಿಸಿ ಸೈಕಲ್ ಸವಾರರಲ್ಲಿ ಉತ್ಸಾಹ ತುಂಬಿದರು.
‘ಕೋವಿಡ್ ಬಳಿಕ ಸಾರ್ವಜನಿಕರ ಆರೋಗ್ಯದಲ್ಲಿ ಏರುಪೇರಾಗಿದ್ದು, ಹಲವು ಕಾಯಿಲೆಗಳಿಂದ ನರಳುವಂತಾಗಿದೆ. ಮಾನಸಿಕ ಖಿನ್ನತೆ ಸಮಸ್ಯೆ ಎದುರಿಸುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಬೈಸಿಕಲ್ ತುಳಿಯುವ ಹವ್ಯಾಸ ಬೆಳೆಸಿಕೊಂಡರೆ ದೈಹಿಕವಾಗಿ ಸದೃಢರಾಗಬಹುದು. ಮಾನಸಿಕ ಆರೋಗ್ಯವನ್ನೂ ಪಡೆಯಬಹುದು’ ಎಂದು ಸಲಹೆ ನೀಡಿದರು.
‘ಬೆಳಗಿನ ಸೈಕಲ್ ಸವಾರಿಯಿಂದ ಪ್ರಕೃತಿಯೊಂದಿಗೆ ಆಪ್ತವಾಗಿ ಬೆರೆಯಬಹುದು. ಹಕ್ಕಿಗಳ ಚಿಲಿಪಿಲಿ ಆಲಿಸಬಹುದು. ಬೆಳಗಿನ ಆಹ್ಲಾದಕರ ವಾತಾವರಣ ಹಾಗೂ ಶುದ್ಧ ಗಾಳಿ ಮನಸ್ಸಿಗೆ ಉಲ್ಲಾಸ ನೀಡುತ್ತದೆ. ಸೈಕಲ್ ತುಳಿದರೆ ಆಲಸ್ಯ ದೂರವಾಗಿ ಇಡೀ ದಿನ ಉತ್ಸಾಹದಿಂದ ಇರಬಹುದು’ ಎಂದರು.
ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಬೆಳಿಗ್ಗೆ 7.15ಕ್ಕೆ ಹೊತ್ತಿಗೆ ಆರಂಭವಾದ ರ‍್ಯಾಲಿಯು ನಗರದ ಪ್ರಮುಖ ಬೀದಿಗಳಲ್ಲಿ 6 ಕಿ.ಮೀ ಸಂಚರಿಸಿ ಸಮಾಪ್ತಿಗೊಂಡಿತು.
ಡಿವೈಎಸ್‌ಪಿ ಪ್ರಮಾನಂದ ಎಸ್.ಘೋಡಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವೀರೇಶ ನಾಯಕ, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ರಾಯಚೂರಿನಲ್ಲಿ ಭಾನುವಾರ ವಿಶ್ವ ಬೈಸಿಕಲ್ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಬೈಸಿಕಲ್ ಜಾಥಾಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ಪುಟ್ಟಮಾದಯ್ಯ ಚಾಲನೆ ನೀಡಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.