ADVERTISEMENT

ಸಮಾಜದ ಅಂಕುಡೊಂಕು ಎತ್ತಿ ತೋರಿಸಿದ ಸಾಹಿತಿ  ಶಾಂತರಸ: ಪ್ರೊ.ಶಿವಾನಂದ ಕೆಳಗಿನಮನಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 15:35 IST
Last Updated 8 ಫೆಬ್ರುವರಿ 2026, 15:35 IST
   

ರಾಯಚೂರು: ‘ಸಮಾಜದಲ್ಲಿರುವ ಅಂಕುಡೊಂಕುಗಳನ್ನು ಎತ್ತಿ ತೋರಿಸುತ್ತ ಎಲ್ಲ ಕಾಲದ ಸಾಹಿತ್ಯವನ್ನು ಅವಲೋಕನಗಳನ್ನ ಮಾಡಿದವರು ಶಾಂತರಸರು. ವಿಭಿನ್ನ ಪ್ರಯೋಗದ ಮೂಲಕ ಸಾಹಿತ್ಯವನ್ನು ಈ ನಾಡಿಗೆ ನೀಡಿದರು’ ಎಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಿವಾನಂದ ಕೆಳಗಿನಮನಿ ಹೇಳಿದರು. 

ನಗರದ ಎಸ್.ಆರ್. ಕೆ. ಬಿ ಎಡ್ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ, ಲೋಹಿಯಾ ಪ್ರತಿಷ್ಠಾನ ಹಾಗೂ ಕಲಬುರ್ಗಿಯ ರಂಗಸಂಗಮ ಕಲಾ ವೇದಿಕೆ ಆಶ್ರಯದಲ್ಲಿ ಡಾ.ಸುಜಾತ ಜಂಗಮಶೆಟ್ಟಿ ಸಂಪಾದಿತ ‘ಅಶಾಂತ ಸಂತ ಶಾಂತರಸ‘ ಬದುಕು ಬರಹ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಸೃಜನಶೀಲ, ಸೃಜನೇತರ, ಹೋರಾಟ, ಸಂಪಾದನೆ ಅಥವಾ ಸಂಶೋಧನೆ ನಾಲ್ಕು ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. 47 ರ ಕಾಲದಲ್ಲಿ ತುಂಬಾ ಕಷ್ಟದ ಪರಿಸ್ಥಿತಿಯಲ್ಲಿ ಅವರ ಕಥೆಗಳು ಈ ಭಾಗದ ಜನರು ಎಷ್ಟು ಕಷ್ಟಕ್ಕೆ ಒಳಗಾಗಿದ್ದರು ಎಂಬುದನ್ನು ಗಮನಿಸಬಹುದು‘ ಎಂದು ತಿಳಿಸಿದರು.

ADVERTISEMENT

‘ಪುನರುತ್ಥಾನದ ಕವಿಯಾಗಿ ಕಾಣಿಸಿಕೊಂಡ ಶಾಂತರಸರು ಉರ್ದುವಿನ ಭಾರಮಾಸ ಕೃತಿಯನ್ನು ಕನ್ನಡಕ್ಕೆ ತಂದಿದ್ದಾರೆ. ಜೀವನ ಸಂಸ್ಕೃತಿ, ಬೆಳಗಿನ ವಿಚಾರ, ಕಾವ್ಯವನ್ನು ಕನ್ನಡಕ್ಕೆ ಕೊಟ್ಟ ಕೀರ್ತಿ ಶಾಂತರಸರಿಗೆ ಸಲ್ಲುತ್ತದೆ. ಹಾಗಾಗಿ ಇವತ್ತಿಗೂ ಶಾಂತರಸರ ಚಿಂತನೆಗಳನ್ನು ಮತ್ತೆ ಮತ್ತೆ ನಾವು ಪುನರ್ ಪರಿಶೀಲನೆ ಮಾಡಬೇಕಾಗಿದೆ. ಜೊತೆಗೆ ರಾಯಚೂರು ಪ್ರದೇಶದಲ್ಲಿರುವ ಎಲಲ್ ಕವಿಗಳನ್ನು ಗುರುತಿಸುವ ಹಿನ್ನೆಲೆಯಲ್ಲಿ ಮಲ್ಲಿಗೆ ಮಾರನ್ನು ಹೊರ ತರುವುದರ ಮೂಲಕ ಸ್ಥಳೀಯರಿಗೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದಾರೆ’ ಎಂದೂ ಅವರು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ರಂಗಣ್ಣ ಪಾಟೀಲ ಅಳ್ಳುಂಡಿ ಅಧ್ಯಕ್ಷತೆ ವಹಿಸಿದ್ದರು. ಕೃತಿಯ ಪ್ರಧಾನ ಸಂಪಾದಕ ಎಚ್. ಎಸ್. ಬಸವ ಪ್ರಭು, ಕೃತಿಯ ಸಂಪಾದಕ ಸುಜಾತಾ ಜಂಗಮಶೆಟ್ಟಿ, ಕರ್ನಾಟಕ ವಿಕಾಸ ರಂಗದ ಜಿಲ್ಲಾಧ್ಯಕ್ಷ ಭೀಮನಗೌಡ ಇಟಗಿ, ಬೆಂಗಳೂರಿನ ವೀಣಾ ದೇವರಾಜ, ಗದಗಿನ ಭಾರತಿ ಮೋಹನಕೋಟಿ, ಎಸ್. ಆರ್. ಕೆ. ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ವಿರೂಪಾಕ್ಷಿ ಬಿ.ಎಂ. ಉಪಸ್ಥಿತರಿದ್ದರು.

ಗಣಪತಿ ಪೂಜಾರ್ ಅವರ ಪ್ರಾರ್ಥನೆ ಗೀತೆ ಹಾಡಿದರು. ತಾಯಪ್ಪ ಬಿ. ಹೊಸೂರು ಸ್ವಾಗತಿಸಿದರು, ಪ್ರತಿಭಾ ಗೋನಾಳ ನಿರೂಪಿಸಿದರು. ರಾವುತರಾವ್ ಬರೂರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.