ಸಿಂಧನೂರು: ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಎಳ್ಳ ಅಮಾವಾಸ್ಯೆ ಅಂಗವಾಗಿ ಸೋಮವಾರ ರೈತ ಕುಟುಂಬದವರು ತಮ್ಮ ಹೊಲಗಳಿಗೆ ತೆರಳಿ ಚರಗ ಚೆಲ್ಲಿ ಸಂಭ್ರಮಿಸಿದರು.
ಬೆಳ್ಳಂಬೆಳಿಗ್ಗೆ ರೈತರು ಮನೆಗಳಲ್ಲಿ ಅಡುಗೆ ಮಾಡಿ ಬುತ್ತಿ ಕಟ್ಟಿಕೊಂಡು ಹೊಸ ಬಟ್ಟೆಗಳನ್ನು ಧರಿಸಿ ಹೆಂಡತಿ, ಮಕ್ಕಳು ಸೇರಿದಂತೆ ಕುಟುಂಬ ಸಮೇತ ಅಲಂಕೃತ ಎತ್ತಿನ ಬಂಡಿ, ಟ್ರ್ಯಾಕ್ಟರ್, ಕಾರುಗಳಲ್ಲಿ ಹೊಲಗಳಿಗೆ ಪಯಣಿಸಿದರು.
ನಗರದ ರೈಲ್ವೆ ಸ್ಟೇಷನ್ ಸೇರಿದಂತೆ, ಹೊಸಳ್ಳಿ, ಅಮರಾಪುರ, ಸಾಸಲಮರಿ, ಗೊರೇಬಾಳ, ಅರಗಿನಮರ ಕ್ಯಾಂಪ್, ಜವಳಗೇರಾ, ಮಲ್ಕಾಪುರ ಕ್ಯಾಂಪ್, ರೈತನಗರ ಕ್ಯಾಂಪ್, ಮಲ್ಲದಗುಡ್ಡ ಸೇರಿದಂತೆ ವಿವಿಧ ಗ್ರಾಮಗಳ ಹೊಲಗಳಲ್ಲಿ ರೈತರು, ಮಹಿಳೆಯರು, ಮಕ್ಕಳು ಬನ್ನಿ ಮರಕ್ಕೆ ಸೀರೆ ತೊಡಿಸಿ, ಉಡಿ ತುಂಬಿ, ಪಾಂಡವರನ್ನು ಪ್ರತಿಷ್ಠಾಪಿಸಿ ಪೂಜಿಸಿದರು.
ಪೂಜೆಗೆ ಅರ್ಪಿಸಿದ ನೈವೇದ್ಯವನ್ನು ‘ಹುಲ್ಲುಲ್ಲಿಗೋ... ಚೆಲ್ಲೆಂಬ್ರಿಗೊ...’ ಎನ್ನುತ್ತ ಜಮೀನಿನ ನಾಲ್ಕು ದಿಕ್ಕಿನಲ್ಲಿ ಸುತ್ತಾಡಿ ಚರಗ ಚೆಲ್ಲಿದರು. ‘ಉತ್ತಮ ಫಸಲು ಬರಲಿ, ಮನೆ ತುಂಬ ದವಸ ಧಾನ್ಯ ತುಂಬಲಿ ಹಾಗೂ ಮುಂದೆಯೂ ಉತ್ತಮ ಮಳೆ-ಬೆಳೆ ಆಗಲಿ’ ಎಂದು ಪ್ರಾರ್ಥಿಸಿದರು.
ರೈತರು ತಮ್ಮ ಕುಟುಂಬಸ್ಥರೊಂದಿಗೆ ಸಂಬಂಧಿಕರು ಹಾಗೂ ಗೆಳೆಯರನ್ನು ಹೊಲಗಳಿಗೆ ಆಹ್ವಾನಿಸಿ ಎಳ್ಳು ಹೋಳಿಗೆ, ಹೂರಣದ ಹೋಳಿಗೆ, ಶೇಂಗಾ ಹೋಳಿಗೆ, ಸಜ್ಜಿ ರೊಟ್ಟಿ, ಪುಂಡಿಪಲ್ಲೆ, ಬದನೆಕಾಯಿ ಪಲ್ಲೆ, ಶೇಂಗಾ, ಗುರೆಳ್ಳು, ಪುಠಾಣಿ ಚಟ್ನಿ, ಕರಿಗಡಬು, ಬಜ್ಜಿ, ಹಪ್ಪಳ ಸೇರಿದಂತೆ ತರಹೇವಾರಿ ಖಾದ್ಯಗಳನ್ನು ಉಣಬಡಿಸಿದ ದೃಶ್ಯ ಕಂಡುಬಂತು.
ಹೊಲ ಇಲ್ಲದವರು ಕೂಡ ಎಳ್ಳ ಅಮಾವಾಸ್ಯೆಯನ್ನು ತಮ್ಮ ಸ್ನೇಹಿತರ, ಸಂಬಂಧಿಕರ ಹೊಲ ಮತ್ತು ಉದ್ಯಾನ ಮುಂತಾದ ಸ್ಥಳಗಳಲ್ಲಿ ಆಚರಿಸಿದರು. ಹೊಲಗಳಲ್ಲಿ ಊಟ ಸವಿದ ಮಕ್ಕಳು, ಯುವಕ, ಯುವತಿಯರು ಆಟವಾಡಿ ಸಂಭ್ರಮಿಸಿದರು. ಕೆಲವರು ಸೆಲ್ಫಿ ಪಡೆದರೆ, ಮತ್ತೆ ಕೆಲವರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
‘ರೈತರು ಆರಾಧಿಸುವ ಹಬ್ಬಗಳಲ್ಲಿ ಎಳ್ಳ ಅಮಾವಾಸ್ಯೆಯೂ ಒಂದು. ಈ ಹಬ್ಬ ಸ್ನೇಹ, ಸೌಹಾರ್ದ ಮತ್ತು ರೈತ ಸಂಸ್ಕೃತಿಯ ಸಂಕೇತವಾಗಿದೆ’ ಎಂದು ರೈತರಾದ ಮಲ್ಲಯ್ಯ ವಳಬಳ್ಳಾರಿ, ಮಂಜುನಾಥಗೌಡ ಮಲ್ಕಾಪುರ, ಅಶೋಕಗೌಡ ಗದ್ರಟಗಿ ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.