ADVERTISEMENT

ಬಸ್ ಚಾಲಕ, ನಿರ್ವಾಹಕರೊಂದಿಗೆ ಮಾತಿನ ಚಕಮಕಿ: FIRಗೆ ಹೆದರಿ ಯುವಕ ನೇಣಿಗೆ ಶರಣು

​ಪ್ರಜಾವಾಣಿ ವಾರ್ತೆ
Published 29 ಮೇ 2025, 19:27 IST
Last Updated 29 ಮೇ 2025, 19:27 IST
ರಾಯಚೂರು ಜಿಲ್ಲೆಯ ಲಿಂಗಸುಗೂರು ಸಾರಿಗೆ ಘಟಕದ ಎದುರು ಗುರುವಾರ ಮುತ್ತಣ್ಣ ಕುರಿ ಎಂಬುವವರ ಶವವಿಟ್ಟು ಪ್ರತಿಭಟನೆ ನಡೆಸಲಾಯಿತು
ರಾಯಚೂರು ಜಿಲ್ಲೆಯ ಲಿಂಗಸುಗೂರು ಸಾರಿಗೆ ಘಟಕದ ಎದುರು ಗುರುವಾರ ಮುತ್ತಣ್ಣ ಕುರಿ ಎಂಬುವವರ ಶವವಿಟ್ಟು ಪ್ರತಿಭಟನೆ ನಡೆಸಲಾಯಿತು   

ಲಿಂಗಸುಗೂರು (ರಾಯಚೂರು ಜಿಲ್ಲೆ): ಬಸ್ ಚಲಿಸುವಾಗ ಕೆಸರು ಸಿಡಿದಿದ್ದಕ್ಕೆ ಬಸ್ ಚಾಲಕ ಹಾಗೂ ನಿರ್ವಾಹಕರೊಂದಿಗೆ ಮಾತಿನ ಚಕಮಕಿ ನಡೆದಿದ್ದು, ತನ್ನ ಮೇಲೆ ಬಸ್ ಚಾಲಕ ಪ್ರಕರಣ ದಾಖಲಿಸಿದ್ದರಿಂದ ಬಂಧನವಾಗುವ ಭೀತಿಯಿಂದ ಯುವಕ‌ ಗುರುವಾರ ನೇಣಿಗೆ ಶರಣಾಗಿದ್ದಾನೆ.‌

ತಾಲ್ಲೂಕಿನ ಹುನಕುಂಟಿ ಗ್ರಾಮದ ಮುತ್ತಣ್ಣ ದೇವಪ್ಪ ಕುರಿ (18) ನೇಣಿಗೆ ಶರಣಾದ ಯುವಕ. 

ಘಟನೆಯ ವಿವರ:

ಸಜ್ಜಲಗುಡ್ಡ–ಬೆಂಗಳೂರು ಮಾರ್ಗದ ಬಸ್ ಬುಧವಾರ ಸಂಜೆ ಸಜ್ಜಲಗುಡ್ಡಕ್ಕೆ ತೆರಳುವಾಗ ಹುನಕುಂಟಿ ಗ್ರಾಮದಲ್ಲಿ ಯುವಕ ಮುತ್ತಣ್ಣ ದೇವಪ್ಪ ಕುರಿ ಅವರಿಗೆ ಕೆಸರು ಸಿಡಿದಿತ್ತು.

ADVERTISEMENT

‘ಕೆಸರು ಸಿಡಿದಿದ್ದರಿಂದ ಯುವಕ ಬಸ್ ಅಡ್ಡಗಟ್ಟಿ ನನ್ನ ಹಾಗೂ ನಿರ್ವಾಹಕನೊಂದಿಗೆ ಮಾತಿನ ಚಕಮಕಿ ನಡೆಸಿದ. ಬಳಿಕ ನನ್ನ ಮೇಲೆ ಮತ್ತು ಜಗಳ ಬಿಡಿಸಲು ಬಂದ ನಿರ್ವಾಹಕ ಸಿದ್ದಲಿಂಗಪ್ಪ ಮೇಲೆ ಹಲ್ಲೆ ನಡೆಸಿದ್ದಾನೆ’ ಎಂದು ಬಸ್‌ ಚಾಲಕ ಬಸಪ್ಪ ಕುಂಬಾರ ಲಿಂಗಸುಗೂರು ಪೊಲೀಸ್ ಠಾಣೆಗೆ ಮುತ್ತಣ್ಣ ಕುರಿ ವಿರುದ್ಧ ದೂರು ನೀಡಿದ್ದರು. 

ಈ ವಿಷಯ ಮುತ್ತಣ್ಣನಿಗೆ ಗೊತ್ತಾಗಿತ್ತು. ‘ತನ್ನ ಮೇಲೆ ಪ್ರಕರಣ ದಾಖಲಾಗಿದೆ’ ಎಂದು ಹೆದರಿದ ಮುತ್ತಣ್ಣ ಜಮೀನೊಂದರಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುತ್ತಣ್ಣನ ಸಾವಿಗೆ ಚಾಲಕ ಮತ್ತು ನಿರ್ವಾಹಕ ಕಾರಣ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ಪಟ್ಟಣದ ಸಾರಿಗೆ ಘಟಕದ ಎದುರು ಮುತ್ತಣ್ಣನ ಶವ ಇಟ್ಟು ಪ್ರತಿಭಟನೆ ನಡೆಸಿದರು. ಇದರಿಂದ ಕೆಲ ಹೊತ್ತು ವಾತಾವರಣ ಬಿಗುವಿನಿಂದ ಕೂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.