ADVERTISEMENT

ನಿಮ್ಮ ಪಾಲಿನ ನೀರು ಹರಿಯುತ್ತಿಲ್ಲ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 16:06 IST
Last Updated 27 ಜೂನ್ 2025, 16:06 IST
ದೇವದುರ್ಗ ತಾಲ್ಲೂಕಿನ ಮಿಯ್ಯಾಪುರ್ ಕ್ರಾಸ್ ಬಳಿ ನಿರ್ಮಿಸಿದ ಎಚ್.ಡಿ. ದೇವೇಗೌಡ ಪುತ್ಥಳಿಯನ್ನು ನಿಖಿಲ್ ಕುಮಾರಸ್ವಾಮಿ ಲೋಕಾರ್ಪಣೆಗೊಳಿಸಿದರು
ದೇವದುರ್ಗ ತಾಲ್ಲೂಕಿನ ಮಿಯ್ಯಾಪುರ್ ಕ್ರಾಸ್ ಬಳಿ ನಿರ್ಮಿಸಿದ ಎಚ್.ಡಿ. ದೇವೇಗೌಡ ಪುತ್ಥಳಿಯನ್ನು ನಿಖಿಲ್ ಕುಮಾರಸ್ವಾಮಿ ಲೋಕಾರ್ಪಣೆಗೊಳಿಸಿದರು   

ದೇವದುರ್ಗ: ‘ನಾನು ನೀರು ಕೊಟ್ಟೆ ಎಂದು ಸಮಾಧಾನ ಬೇಡ. ನಿಮ್ಮ ಪಾಲಿನ ನೀರು ಬಾಕಿ ಇದೆ’ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.

ಪಟ್ಟಣದ ಟಿಎಪಿಎಂಸಿ ಮೈದಾನದಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ದೇವೇಗೌಡರಿಗೆ ಅಭಿನಂದನೆ, ಮೂರ್ತಿ ಉದ್ಘಾಟನೆ, ಹಾಗೂ ಸದಸ್ಯತ್ವ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

‘ಮೂರ್ತಿ ಸ್ಥಾಪಿಸಿರುವ ಖುಷಿಗಿಂತ ನಿಮ್ಮ ಪಾಲಿನ ಸಮರ್ಪಕ ನೀರು ಹರಿಯುತ್ತಿಲ್ಲ ಎಂಬ ನೋವಿದೆ. ಸಂಘಟಿತರಾಗಿ ಹೊರಾಟ ಮಾಡಿ. ರೈತರ ವಿಷಯದಲ್ಲಿ ರಾಜಕಾರಣ ಮಾಡಲ್ಲ. ನೆರೆಯ ತಮಿಳುನಾಡು, ಕೇರಳ ಮಾದರಿಯಲ್ಲಿ ಜೆಡಿಎಸ್ ಪ್ರಾದೇಶಿಕ ಪಕ್ಷವನ್ನು ಬಲಪಡಿಸಿ. ಜೆಡಿಎಸ್ ಪಕ್ಷ ಬಹುಮತ ಇಲ್ಲದೆ ಅಧಿಕಾರಕ್ಕೆ ಬಂದಾಗ ರಾಜ್ಯ ಮತ್ತು ಕೇಂದ್ರದಲ್ಲಿ ರೈತಪರ, ಮಹಿಳೆಯರಿಗೆ ಶೇ 33 ಮೀಸಲಾತಿ ಬಿಲ್ ಮತ್ತು ಅಲ್ಪಸಂಖ್ಯಾತರಿಗೆ ಶೇ 4 ಮೀಸಲಾತಿ ಹಾಗೂ ಪರಿಶಿಷ್ಟ ವರ್ಗಕ್ಕೆ ಎಸ್ಟಿ ಮೀಸಲಾತಿ ನೀಡುವ ಕಾರ್ಯಗಳು ಆಗಿವೆ’ ಎಂದರು.

ADVERTISEMENT

‘ಕೇಂದ್ರ ಸಚಿವ ಕುಮಾರಸ್ವಾಮಿಗೆ ದೇವದುರ್ಗದಲ್ಲಿ ಹತ್ತಿ ಕಾರ್ಖಾನೆ ಸ್ಥಾಪಿಸಿ ರೈತರಿಗೆ ಅನುಕೂಲ ಮಾಡಿಕೊಡಲು ತಿಳಿಸುವೆ. ಪ್ರಧಾನಿ ಮೋದಿ ಗಮನಕ್ಕೂ ತರುವೆ. ಜೆಡಿಎಸ್ ಶಾಸಕರು ಕಾಂಗ್ರೆಸ್‌ ಪಕ್ಷಕ್ಕೆ ಬರುತ್ತಾರೆ ಎಂದು ಅಪಪ್ರಚಾರ ನಡೆಸಿದೆ. ಮೊದಲು ಬಿಬಿಎಂಪಿ ಗುಮಾಸ್ತರಿಗೆ ಸಂಬಳ ಕೊಡಿ’ ಎಂದು ರಾಜ್ಯ ಸರ್ಕಾರವನ್ನು ಟೀಕಿಸಿದರು.

ಶಾಸಕಿ ಕರೆಮ್ಮ ಜಿ.ನಾಯಕ ಮಾತನಾಡಿ,‘ಗ್ಯಾರಂಟಿ ಯೋಜನೆಗೆ ನಮ್ಮ ವಿರೋಧ ಇಲ್ಲ. ಆದರೆ ಶಾಸಕರ ಹಕ್ಕುಗಳನ್ನು ಕಸಿದುಕೊಂಡಿದೆ. ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಬೇಕು. ಸರ್ಕಾರದ ಅನುದಾನ ಕೊರತೆ ಮಧ್ಯೆ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯಿಂದ ಬರುವ ಅನುದಾನದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿರುವೆ’ ಎಂದರು.

ಜೆಡಿಎಸ್‌ ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ,‘ದೇವದುರ್ಗ ಜನರಲ್ಲಿರುವ ಪ್ರಜಾಪ್ರಭುತ್ವ ವ್ಯವಸ್ಥೆಯ ಜ್ಞಾನವನ್ನು ತಿಳಿಯಲು ಬಂದಿರುವೆ. ಜೆಡಿಎಸ್ ಪಕ್ಷ ಮತ್ತು ದೇವದುರ್ಗಕ್ಕೆ ಅವಿನಾಭಾವ ಸಂಬಂಧವಿದೆ. ಕುಟುಂಬ ರಾಜಕೀಯ ಅಧಿಕಾರದ ಆಸೆಗೆ ರಾಜಕಾರಣ ಮಾಡುತ್ತಿಲ್ಲ. ರಾಜ್ಯಾದ್ಯಂತ ಪಕ್ಷ ಕಟ್ಟಿ ಮುಂಬರುವ ದಿನದಲ್ಲಿ ಪಕ್ಷ  ಅಧಿಕಾರಕ್ಕೆ ತರುತ್ತೇವೆ’ ಎಂದರು.

ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಮಾತನಾಡಿ,‘ದೇವದುರ್ಗದಲ್ಲಿ ಬಡತನ ನಿವಾರಣೆ ಆಗಿದೆ. ಜೆಡಿಎಸ್ ಪಕ್ಷದ ಅವಧಿಯಲ್ಲಿ ಆದ ನೀರಾವರಿ ಅಭಿವೃದ್ಧಿಯಿಂದ ರೈತರು ಆರ್ಥಿಕವಾಗಿ ಸಬಲರಾಗಿದ್ದಾರೆ’ ಎಂದರು.

ಈ ವೇಳೆ ಮುಂಡರಗಿಯ ಸಿದ್ದಣ ತಾತ, ಶಿವಮೊಗ್ಗ ಗ್ರಾಮೀಣ ಶಾಸಕಿ ಶಾರದಾ ಪೂರ್ಯನಾಯ್ಕ್, ಕೋಲಾರ ಸಂಸದ ಮಲ್ಲೇಶ ಬಾಬು, ಚಿಕ್ಕನಾಯಕನಹಳ್ಳಿ ಶಾಸಕ ಹಾಗೂ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್‌ ಬಾಬು, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ರಾಮೇಗೌಡ, ಮಾಜಿ ಶಾಸಕರಾದ ರಾಜಾವೆಂಕಟಪ್ಪ ನಾಯಕ, ದೇವದುರ್ಗದ ಹನುಮಂತಪ್ಪ ಆಲ್ಕೋಡ, ಬೀದರ್ ಬಂಡೆಪ್ಪ ಕಾಶಂಪುರ, ಜೆಡಿಎಸ್ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ, ಮಹಾಂತೇಶ ಪಾಟೀಲ ಅತ್ತನೂರು, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಬುಡ್ಡನಗೌಡ ಜಾಗಟಗಲ್ ಮತ್ತು ಜೆಡಿಎಸ್ ಕಾರ್ಯಕರ್ತರು ಭಾಗವಹಿಸಿದ್ದರು.

ದೇವದುರ್ಗ ಪಟ್ಟಣದ ಟಿಎಪಿಎಂಸಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ಮೂರ್ತಿ ಉದ್ಘಾಟನೆ ಸದಸ್ಯತ್ವ ಅಭಿಯಾನ ಜೆಡಿಎಸ್ ಬೃಹತ್ ಸಮಾವೇಶ ಮಾಜಿ ಪ್ರಧಾನಿ ದೇವೇಗೌಡ ಉದ್ಘಾಟಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.