ADVERTISEMENT

ಜಿಟಿಜಿಟಿ ಮಳೆ: ತಣಿದ ಇಳೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 20:00 IST
Last Updated 1 ಡಿಸೆಂಬರ್ 2019, 20:00 IST
ಮಳೆಯಲ್ಲಿ ಬೈಕ್‌ ಸವಾರರೊಬ್ಬರು ಚಾಮರಾಜಪೇಟೆಯಲ್ಲಿ ಸಾಗಿದರು
ಮಳೆಯಲ್ಲಿ ಬೈಕ್‌ ಸವಾರರೊಬ್ಬರು ಚಾಮರಾಜಪೇಟೆಯಲ್ಲಿ ಸಾಗಿದರು   

ಬೆಂಗಳೂರು: ನಗರದಲ್ಲಿ 2–3 ದಿನಗಳಿಂದ ಕವಿದಿದ್ದ ಮೋಡದ ವಾತಾವರಣ ಚಳಿಗೆ ಕಾರಣವಾಗಿದ್ದರೆ, ಭಾನುವಾರ ಸುರಿದ ಜಿಟಿಜಿಟಿ ಮಳೆಯಿಂದಾಗಿ ತೀವ್ರತೆ ಮತ್ತಷ್ಟು ಹೆಚ್ಚಿತು.

ಬೆಳಗ್ಗಿನಿಂದಲೇ ನಗರದ ವಿವಿಧ ಭಾಗಗಳಲ್ಲಿ ಮಳೆ ಸುರಿಯಿತು. ಕೇಂದ್ರ ಭಾಗದಲ್ಲಿರುವ ಮಳೆ ಮಾಪನ ಕೇಂದ್ರದಲ್ಲಿ 6.4 ಮಿ.ಮೀ., ಎಚ್‍ಎಎಲ್‍ನಲ್ಲಿ 4.5 ಮಿ.ಮೀ., ಕೆಐಎಎಲ್‍ನಲ್ಲಿ 1 ಮಿ.ಮೀ. ಮಳೆ ಸುರಿದಿರುವುದು ದಾಖಲಾಗಿದೆ.

ಕೆಲವು ಭಾಗಗಳಲ್ಲಿ ಜೋರಾಗಿ ವರ್ಷಧಾರೆಯಾಗಿದೆ. ಇನ್ನೂ ಕೆಲವೆಡೆ ಸಾಧಾರಣ ಪ್ರಮಾಣದಲ್ಲಿ ಸುರಿದಿದೆ. ಬಹುತೇಕ ಭಾಗಗಳಲ್ಲಿ ತುಂತುರು ಮಳೆಯಾಗಿದೆ. ಅರಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ತಾಪಮಾನದಲ್ಲಿ ವ್ಯತ್ಯಯ ಉಂಟಾಗಿ, ಮಳೆ ಸುರಿಯುತ್ತಿದೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.

ADVERTISEMENT

ಮಳೆಯಿಂದಾಗಿ ವಾತಾವರಣದ ಉಷ್ಣತೆಯಲ್ಲಿ ದಿಢೀರ್‌ ಕುಸಿದೆ. ನಗರದ ಕೇಂದ್ರ ಭಾಗಗಳಲ್ಲಿ ಸರಾಸರಿ 24 ಡಿಗ್ರಿ ಸೆಲ್ಸಿಯಸ್‌ನಷ್ಟು ಇದ್ದ ಗರಿಷ್ಠ ತಾಪಮಾನ, ಮಳೆ ಹಾಗೂ ತಂಪು ಗಾಳಿ ಬೀಸಿದ ಪರಿಣಾಮ 23 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಎಚ್‍ಎಎಲ್‍ನಲ್ಲಿ 23.6 ಡಿಗ್ರಿ, ಕೆಐಎಎಲ್‍ನಲ್ಲಿ 24 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ವಾಯುಭಾರ ಕುಸಿತ ಪರಿಣಾಮ ಇನ್ನೂ ಎರಡು ದಿನ ಮುಂದುವರಿಯಲಿದೆ. ಹೀಗಾಗಿ, ಮೋಡ ಕವಿದ ವಾತಾವರಣ ಹಾಗೂ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ನಸುಕಿನಲ್ಲಿ ದಟ್ಟವಾಗಿ ಮಂಜು ಕವಿಯಲಿದೆ ಎಂದೂ ಇಲಾಖೆ ಮಾಹಿತಿ ನೀಡಿದೆ.

ಎಲ್ಲಿ, ಎಷ್ಟು ಮಳೆ?: ಬೊಮ್ಮನಹಳ್ಳಿ ವಲಯದಲ್ಲಿ ಸರಾಸರಿ 10 ಮಿ.ಮೀ., ರಾಜರಾಜೇಶ್ವರಿ ನಗರ ವಲಯದಲ್ಲಿ 5 ಮಿ.ಮೀ., ಪಶ್ಚಿಮ ವಲಯದಲ್ಲಿ 6 ಮಿ.ಮೀ., ದಕ್ಷಿಣ ವಲಯದಲ್ಲಿ 10 ಮಿ.ಮೀ. ಮಳೆಯಾಗಿದೆ. ಉಳಿದಂತೆ, ನಂದಿನಿ ಲೇಔಟ್, ಯಶವಂತಪುರ, ರಾಜಾಜಿನಗರ, ಚಾಮರಾಜಪೇಟೆ, ಹೆಬ್ಬಾಳ, ಆರ್.ಟಿ.ನಗರ, ವಿದ್ಯಾಪೀಠ, ವಿ.ವಿ.ಪುರ, ವಿದ್ಯಾರಣ್ಯಪುರ, ಯಲಹಂಕ, ಕೋರಮಂಗಲ, ಎಚ್‍ಎಸ್‍ಆರ್ ಲೇಔಟ್, ಕೆ.ಆರ್. ಮಾರುಕಟ್ಟೆ, ಮೆಜೆಸ್ಟಿಕ್, ಮಲ್ಲೇಶ್ವರ, ಕೆ.ಆರ್.ಪುರ, ಮಹದೇವಪುರ ಮತ್ತಿತರ ಪ್ರದೇಶಗಳಲ್ಲಿ ತುಂತುರು ಮಳೆ ಸುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.