ADVERTISEMENT

ಆಯ್ಕೆಗೆ ಕುಮಾರಸ್ವಾಮಿ ಸಂಧಾನ ಸೂತ್ರ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 18:30 IST
Last Updated 17 ಫೆಬ್ರುವರಿ 2011, 18:30 IST

ರಾಮನಗರ:  ಜಿಲ್ಲಾ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಮೂವರು ಸದಸ್ಯರಿಂದ ತೀವ್ರ ಪೈಪೋಟಿ ಇದ್ದ ಕಾರಣ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಆದೇಶದ ಮೇರೆಗೆ ಈ ಮೂವರಿಗೂ ಅಧಿಕಾರ ದೊರೆಯುವಂತೆ ಸೂತ್ರವನ್ನು ಸಿದ್ಧಪಡಿಸಲಾಗಿದ್ದು, ಅದಕ್ಕೆ ಎಲ್ಲರೂ ಸಮ್ಮತಿ ಸೂಚಿಸಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷರಾದ ಶಾಸಕ ಕೆ.ರಾಜು ತಿಳಿಸಿದರು.

ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಪಕ್ಷದ ಕಲ್ಪನಾ ಮಲ್ಲಿಕಾರ್ಜುನೇಗೌಡ ಅವರನ್ನು ಅಭಿನಂದಿಸಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.20 ತಿಂಗಳ ಅವಧಿಯನ್ನು ತಲಾ ಆರು ತಿಂಗಳಂತೆ ಮೂವರು ಆಕಾಂಕ್ಷಿ ಸದಸ್ಯರಿಗೂ ಹಂಚಲು ತೀರ್ಮಾನಿಸಲಾಗಿದೆ.ಮೊದಲ ಅವಧಿಯಲ್ಲಿ ಅಕ್ಕೂರಿನ ಕಲ್ಪನಾ ಮಲ್ಲಿಕಾರ್ಜುನೇಗೌಡ, ಎರಡನೇ ಅವಧಿಯಲ್ಲಿ ದೊಡ್ಡ ಮಳೂರಿನ ಯು.ಪಿ.ನಾಗೇಶ್ವರಿ ಹಾಗೂ ಮೂರನೇ ಅವಧಿಯಲ್ಲಿ ಕುದೂರಿನ ಬಿ.ವಿ.ಹಂಸಕುಮಾರಿ ಅಧಿಕಾರ ನಡೆಸುವರು ಎಂದು ಅವರು ಹೇಳಿದರು.

ಈ ರೀತಿಯ ಅಧಿಕಾರ ಹಂಚಿಕೆ ಸೂತ್ರ ರಚಿಸಲಾಗಿದೆ.ಪಕ್ಷದ ಮುಖಂಡರು ಕಾಲ ಮತ್ತು ಸಂದರ್ಭಕ್ಕೆ ತಕ್ಕಂತೆ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿ ಕಾರ್ಯ ನಿರ್ವಹಿಸಲು ಮೂವರೂ ಆಕಾಂಕ್ಷಿಗಳು ಒಪ್ಪಿಗೆ ಸೂಚಿಸಿದ್ದಾರೆ ಎಂದು ಅವರು ತಿಳಿಸಿದರು.

ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ಪಿತೂರಿ ನಡೆಸಿತ್ತು. ಜೆಡಿಎಸ್‌ನಲ್ಲಿ ಒಡಕು ಸೃಷ್ಟಿಸಿ ಅಧ್ಯಕ್ಷ ಸ್ಥಾನ ಅಲಂಕರಿಸುವ ಕನಸು ಕಂಡಿತ್ತು.ಆದರೆ ಅದಕ್ಕೆಲ್ಲ ನಮ್ಮ ಸದಸ್ಯರು ಅವಕಾಶ ಮಾಡಿಕೊಡದೆ, ಪಕ್ಷದ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗೌರವ ಕಾಪಾಡಿದ್ದಾರೆ ಎಂದು ಹೇಳಿದರು.‘ಆಪರೇಷನ್ ಹಸ್ತದ ಭೀತಿ ನಮಗೆ ಇರಲಿಲ್ಲ. ಆದರೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಮನಗರ ಜಿಲ್ಲೆಯಲ್ಲಿ ಆಪರೇಷನ್ ಕಮಲವಾಗಲಿ, ಆಪರೇಷನ್ ಹಸ್ತವನ್ನಾಗಲಿ ಮಾಡಲು ಸಾಧ್ಯವಿಲ್ಲ.ಈಗಾಗಲೇ ಚನ್ನಪಟ್ಟಣದಲ್ಲಿ ಆಪರೇಷನ್ ಕಮಲ ಕಾರ್ಯಾಚರಣೆಯನ್ನು ಜನತೆ ಹೇಗೆ ತಿರಸ್ಕರಿಸಿದ್ದಾರೆ ಎಂಬುದು ಜಿ.ಪಂ ಮತ್ತು ತಾ.ಪಂ ಚುನಾವಣೆಯಲ್ಲಿ ಸಾಬೀತಾಗಿದೆ ಎಂದು ಅವರು ಪ್ರತಿಕ್ರಿಯಿಸಿದರು.ಜಿ.ಪಂ ನೂತನ ಅಧ್ಯಕ್ಷೆ ಕಲ್ಪನಾ ಮಲ್ಲಿಕಾರ್ಜುನೇಗೌಡ ಮಾತನಾಡಿ ‘ನನಗೆ ದೊರೆಯುವ ಅಲ್ಪಾವಧಿಯಲ್ಲಿಯೇ ಅಭಿವೃದ್ಧಿ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡುವುದಾಗಿ’ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜೆಡಿಎಸ್ ಮುಖಂಡರಾದ ಮಲ್ಲಿಕಾರ್ಜುನೇಗೌಡ, ಬೋರವೆಲ್ ರಾಮಚಂದ್ರ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಕೂಟಗಲ್ ದೇವೇಗೌಡ ಹಾಗೂ ಜಿ.ಪಂನ ನೂತನ ಸದಸ್ಯರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.