ADVERTISEMENT

ಎಲ್ಲರ ಗಮನ ಸೆಳೆದ ಗ್ರಾಮೀಣ ಆಟಗಳು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2017, 5:22 IST
Last Updated 24 ಡಿಸೆಂಬರ್ 2017, 5:22 IST

ರಾಮನಗರ: ಲಗೋರಿ, ಚಿನ್ನಿದಾಂಡು, ಕುಂಟೋಬಿಲ್ಲೆ, ಅಣ್ಣೆಕಲ್ಲಾಟ, ರತ್ತೊ ರತ್ತೋ ರಾಯನ ಮಗಳೆ... ಸೇರಿದಂತೆ ವಿವಿಧ ಬಗೆಯ ಗ್ರಾಮೀಣ ಆಟ ಆಡುವುದರಲ್ಲಿ ಮಕ್ಕಳು ಮತ್ತು ಯುವ ಸಮೂಹ ತಲ್ಲೀನವಾಗಿತ್ತು. ಅಲ್ಲಿ ನಡೆಯುತ್ತಿದ್ದ ಪ್ರತಿ ಆಟದಲ್ಲೂ ಭಾಗವಹಿಸಲು ಜಿಲ್ಲೆಯ ವಿವಿಧೆಡೆಯಿಂದ ತಂಡಗಳು ಬಂದಿದ್ದವು. ವಿವಿಧ ತಂಡದಲ್ಲಿದ್ದ ಆಟಗಾರರು ಗ್ರಾಮೀಣ ಕ್ರೀಡೆಯಲ್ಲಿ ಮಿಂದು ಹೋಗಿದ್ದರು.

ಹೌದು, ಇದಿಷ್ಟು ನಡೆದದ್ದು ಇಲ್ಲಿನ ಜಾನಪದ ಲೋಕದಲ್ಲಿ. ದಿ.ಡಾ. ಜಿ. ನಾರಾಯಣ ಅವರ ನೆನಪಿನ ಕಾರ್ಯಕ್ರಮದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ‘ಗ್ರಾಮೀಣ ಆಟಗಳ ಉತ್ಸವ’ ಪ್ರೇಕ್ಷಕರ ಮನಸೂರೆಗೊಂಡಿತು.

ಗ್ರಾಮೀಣ ಹಾಗೂ ಜಾನಪದ ಸೊಗಡಿನ ಆಟಗಳು ಜನ ಮಾನಸದಿಂದ ದೂರ ಸರಿಯದಂತೆ ಮಾಡುವುದೇ ಈ ಉತ್ಸವದ ಪ್ರಮುಖ ಉದ್ದೇಶ. ಹೆಣ್ಣು ಮಕ್ಕಳಿಗೆ ಕಣ್ಣಾಮುಚ್ಚಾಲೆ, ರತ್ತೊ ರತ್ತೊ ರಾಯನ ಮಗಳೆ, ಕುಂಟೋಬಿಲ್ಲೆ, ಬಳೆಚೂರು ಆಟ; ಗಂಡು ಮಕ್ಕಳಿಗೆ ಗೋಲಿ ಆಟ, ಬುಗುರಿ ಆಟ, ಉಪ್ಪುಪ್ಪುಕಡ್ಡಿ ಆಟ ಆಡಿಸಲಾಯಿತು.

ADVERTISEMENT

ಆಟದ ಜತೆಗೆ ಮಕ್ಕಳಿಗಾಗಿ ಹುಲಿ ಕುರಿ ಆಟ, ಚೌಕಾಬಾರ, ಅಳಿಗುಳಿ ಮನೆ ಆಟ, ಅಣ್ಣೆಕಲ್ಲಾಟ, ಲಗೋರಿ ಚಂಡು, ಚಿನ್ನಿದಾಂಡು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಯುವಕ, ಯುವತಿಯರು, ಚಿಣ್ಣರು, ಬಾಲಕ, ಬಾಲಕಿಯರು ವಿವಿಧ ಗ್ರಾಮೀಣ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ರಾಮನಗರ, ಚನ್ನಪಟ್ಟಣ, ಬಿಡದಿ, ಕನಕಪುರ, ಮಾಗಡಿಯಿಂದ ಬಂದಿದ್ದ ಕ್ರೀಡಾಪಟುಗಳು ಕ್ರೀಡೆಯಲ್ಲಿ ಮಿಂದೆದ್ದರು.

ಜಾನಪದ ಲೋಕಕ್ಕೆ ಭೇಟಿ ನೀಡಿದ್ದ ಪ್ರವಾಸಿಗರು ಮಕ್ಕಳಿಗೆ, ಸ್ನೇಹಿತರಿಗೆ, ಸಂಬಂಧಿಕರಿಗೆ ಈ ಆಟಗಳನ್ನು ಕುರಿತು ಮಾಹಿತಿ ನೀಡುತ್ತಿದ್ದರು. ಆ ಮೂಲಕ ತಮ್ಮ ಬಾಲ್ಯದ ದಿನಗಳನ್ನೂ ನೆನಪು ಮಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇನ್ನೂ ಲೋಕಕ್ಕೆ ಭೇಟಿ ನೀಡಿದ್ದ ಪ್ರವಾಸಿಗರು ಸ್ಥಳೀಯ ಗ್ರಾಮೀಣ ಕ್ರೀಡೆಯನ್ನು ನೋಡಿ, ಆಸ್ವಾದಿಸಿದರು. ತಮ್ಮ ಕ್ಯಾಮೆರಾಗಳಲ್ಲಿ, ಮೊಬೈಲ್‌ಗಳಲ್ಲಿ ಫೋಟೊಗಳನ್ನು ಕ್ಲಿಕ್ಕಿಸಿದರು.

ಚಾಲನೆ: ಗ್ರಾಮೀಣ ಆಟಗಳ ಸ್ಪರ್ಧೆಗೆ ಚಾಲನೆ ನೀಡಿದ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ ಮಾತನಾಡಿ ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಅವಶ್ಯಕತೆಯಿದೆ. ಗ್ರಾಮೀಣ ಆಟಗಳಲ್ಲಿ ನಮ್ಮ ನಾಡಿನ ಸಾಂಸ್ಕೃತಿಕ, ಸಾಮಾಜಿಕ ಅಂಶಗಳನ್ನು ಕಾಣಬಹುದಾಗಿದೆ
ಎಂದರು.

ಮಕ್ಕಳು ಅತಿಯಾದ ಮೊಬೈಲ್ ಬಳಸುವುದರಿಂದ ಅವರ ಪ್ರತಿಭೆಯ ಅಂಶಗಳು ನಾಶವಾಗುತ್ತಿವೆ. ಮಕ್ಕಳಲ್ಲಿ ಖಿನ್ನತೆ, ನಿರಾಸಕ್ತಿ ಕಂಡು ಬರುತ್ತಿದೆ. ಪೋಷಕರು ಮಕ್ಕಳ ಉತ್ತಮ ಬೆಳವಣಿಗೆಯ ದೃಷ್ಟಿಯಿಂದ ಮೊಬೈಲ್ ಮತ್ತಿತರ ಸಂಪರ್ಕ ಸಾಧನಗಳಿಂದ ದೂರವಿರಿಸಬೇಕು ಎಂದು ಕಿವಿಮಾತು ಹೇಳಿದರು.

ಕರ್ನಾಟಕ ಜಾನಪದ ಪರಿಷತ್ತಿನ ವ್ಯವಸ್ಥಾಪಕ ನಿರ್ದೇಶಕ ಆದಿತ್ಯ ನಂಜರಾಜ್‌ ಮಾತನಾಡಿ, ಮರೆಯಾಗುತ್ತಿರುವ ಗ್ರಾಮೀಣ ಆಟಗಳನ್ನು ಉಳಿಸಿಕೊಳ್ಳಬೇಕು. ಕಾಲಕ್ಕೆ ಅನುಗುಣವಾಗಿ ಮಕ್ಕಳು ವೈವಿಧ್ಯಮಯ ಆಟಗಳನ್ನು ರೂಢಿಸಿಕೊಳ್ಳಬೇಕು ಎಂದು ಅವರು
ಹೇಳಿದರು.

ಸಂಘಟಕ ರಾಘವೇಂದ್ರ ಜಿ. ನಾರಾಯಣ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸು.ತ. ರಾಮೇಗೌಡ ಇದ್ದರು. ಗಾಯಕ ಮಲ್ಲಯ್ಯ ಪ್ರಾರ್ಥಿಸಿದರು. ಜಾನಪದ ಲೋಕದ ಆಡಳಿತಾಧಿಕಾರಿ ಕುರುವ ಬಸವರಾಜ್‌ ಸ್ವಾಗತಿಸಿದರು. ರಂಗನಿರ್ದೇಶಕ ಬೈರ್ನಳ್ಳಿ ಶಿವರಾಂ ನಿರೂಪಿಸಿದರು.

* * 

ಮಕ್ಕಳು ಮೊಬೈಲ್ ಬಳಸುವುದರಲ್ಲಿ ಮುಳುಗಿ ಹೋಗುತ್ತಿದ್ದಾರೆ. ಇದರಿಂದ ಮಕ್ಕಳಲ್ಲಿನ ಪ್ರತಿಭೆಯ ಅಂಶಗಳು ನಾಶವಾಗುತ್ತಿವೆ
ಟಿ. ತಿಮ್ಮೇಗೌಡ
ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.