ADVERTISEMENT

ಕಳಪೆ ಗುಣಮಟ್ಟದ ಟ್ಯಾಂಕ್ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 9 ಜುಲೈ 2012, 5:25 IST
Last Updated 9 ಜುಲೈ 2012, 5:25 IST

ಕನಕಪುರ: ಗ್ರಾಮದಲ್ಲಿ ನಿರ್ಮಿಸುತ್ತಿರುವ ಓವರ್ ಹೆಡ್ ಟ್ಯಾಂಕ್ ಕಳಪೆ ಯಾಗಿದೆ ಎಂದು ಬೂದಿಗುಪ್ಪೆ ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಹಿಂದೆ ಗ್ರಾಮದಲ್ಲಿ ನಿರ್ಮಿಸಿದ್ದಂತಹ ಓವರ್ ಹೆಡ್ ಟ್ಯಾಂಕ್ ಕಳಪೆಯಾಗಿತ್ತು. ಉತ್ತಮ ಗುಣಮಟ್ಟದಲ್ಲಿ ನಿರ್ಮಿಸದ ಕಾರಣ ನೀರು ತುಂಬುತ್ತಿದ್ದಂತೆಯೇ ಅದು ಸೋರಲು ಶುರುವಾಗಿ ಕೊನೆಗೆ ಶಿಥಿಲಗೊಂಡು ಹಾಳಾಯಿತು. ಈಗ ಅದನ್ನು ಕೆಡವಲಾಗಿದ್ದು ಅದೇ ಜಾಗದಲ್ಲಿ ಮತ್ತೊಮ್ಮೆ  ಹೊಸ ಟ್ಯಾಂಕ್ ನಿರ್ಮಿಸಲಾಗುತ್ತಿದೆ. ಆದರೆ ಇದೂ ಕೂಡಾ ಕಳಪೆ ಗುಣಮಟ್ಟದಲ್ಲಿ ನಿರ್ಮಾಣವಾಗುತ್ತಿದೆ ಎಂದು ದೂರಿದ್ದಾರೆ.
ಕಾಮಗಾರಿ ಯಾರು ಮಾಡಿಸುತ್ತಿದ್ದಾರೆ? ಅಂದಾಜು ವೆಚ್ಚ ಎಷ್ಟು? ಎಂಬುದರ ಬಗ್ಗೆ ಯಾರಿಗೂ ಮಾಹಿತಿಯಿಲ್ಲ. ಕಾಮಗಾರಿ ಮಾಡುತ್ತಿರುವವರನ್ನು ಕೇಳಿದರೆ, `ಜಿಲ್ಲಾ ಪಂಚಾಯಿತಿಯವರು ಹೇಳಿದ್ದಾರೆ. ನಾವು ಮಾಡುತ್ತಿದ್ದೇವೆಂಬ~ ಅಸಮರ್ಪಕ ಉತ್ತರ ನೀಡುತ್ತಾರೆ. ಇನ್ನು ಎಂಜಿನಿಯರ್ ಗುರುಸ್ವಾಮಿ ಅವರನ್ನು ಕೇಳಿದರೆ `ನಾನು ಬೇರೆ ಕೆಲಸದ ಮೇಲೆ ಹೋಗುತ್ತಿದ್ದೇನೆ. ನಂತರ ಹೇಳುತ್ತೇನೆ~ ಎಂದು ಬೇಜವಾಬ್ದಾರಿಯಿಂದ ಉತ್ತರಿಸುತ್ತಾರೆ ಎಂದು ಗ್ರಾಮದ ಸಂಪತ್‌ಕುಮಾರ್ ಅಲವತ್ತುಕೊಂಡರು.

ಸಾರ್ವಜನಿಕರ ಉಪಯೋಗಕ್ಕಾಗಿ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸುವ ಇಂತಹ ಕಾಮಗಾರಿಗಳ ಯಾವುದೇ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡದೆ ಇದ್ದರೆ ಹೇಗೆ? ಇದನ್ನು ಕೇಳುವವರು ಯಾರು ಇಲ್ಲವೇ? ಸಾರ್ವಜನಿಕರು, ಸಾರ್ವಜನಿಕರ ಹಣವೆಂದರೆ ಅಧಿಕಾರಿಗಳಿಗೆ ಇಷ್ಟೊಂದು ಉದಾಸೀನವೇ ಎಂದು ಗ್ರಾಮಸ್ಥರು ಖಾರವಾಗಿ ಪ್ರಶ್ನಿಸಿದ್ದಾರೆ. ಗುಣಮಟ್ಟದ ಕಾಮಗಾರಿ ನಡೆಸದಿದ್ದ ಮೇಲೆ ಕೆಲಸವನ್ನೇ ಮಾಡುವುದು ಬೇಡವೆಂದು ಆಗ್ರಹಿಸಿದ್ದಾರೆ.

ಸಂಬಂಧಪಟ್ಟ ಇಲಾಖೆಯ ಎಂಜಿನಿಯರ್ ಸ್ಥಳಕ್ಕೆ ಬಂದು ಗುಣಮಟ್ಟವನ್ನು ಪರಿಶೀಲಿಸಿ ಉತ್ತಮ ಗುಣಮಟ್ಟದ ಕಾಮಗಾರಿ ನಿರ್ಮಿಸಬೇಕು ಎಂದು ತಾ.ಪಂ. ಮಾಜಿ ಉಪಾಧ್ಯಕ್ಷ ಬಿ.ಸಿ.ಮರಿಯಪ್ಪ, ಬಸವರಾಜು, ಕರಿಯಪ್ಪ, ನಾಗರಾಜು, ದೊಡ್ಡೋನು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.