ADVERTISEMENT

ಖಾಸಗಿ ಶಾಲೆಗಳ ಶುಲ್ಕ ವಸೂಲಿ, ಬಿಇಒಗೆ ದೂರು

​ಪ್ರಜಾವಾಣಿ ವಾರ್ತೆ
Published 13 ಜೂನ್ 2018, 11:04 IST
Last Updated 13 ಜೂನ್ 2018, 11:04 IST

ಚನ್ನಪಟ್ಟಣ: ಆರ್‌ಟಿಇ ಕಾಯ್ದೆಯಡಿಯಲ್ಲಿ ದಾಖಲಾತಿ ಮಾಡಿಕೊಂಡಿರುವ ಮಕ್ಕಳಿಂದ ಪಟ್ಟಣದ ‘ಸ್ಪ್ರಿಂಗ್ ಫೀಲ್ಡ್’ ಶಾಲೆಯು ಶುಲ್ಕ ವಸೂಲಿ ಮಾಡುತ್ತಿದೆ ಎಂದು ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮು ಅವರಿಗೆ ಮಂಗಳವಾರ ದೂರು ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಬಂದ ಪೋಷಕರಾದ ನಗರಸಭಾ ಮಾಜಿ ಸದಸ್ಯ ಕೃಷ್ಣೇಗೌಡ, ವಿಠಲೇನಹಳ್ಳಿ ಗ್ರಾಮದ ಅಂಗಡಿ ಕೃಷ್ಣೇಗೌಡ, ಕಾಂತರಾಜು, ರಮೇಶ್, ಮೊಗಣ್ಣ, ಕುಮಾರ್, ಚಂದ್ರು, ವೈದ್ಯೇಗೌಡ, ರಾಜು ಅವರು ಬಡ ಮಕ್ಕಳಿಗೂ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ದೊರಕಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ರೂಪಿಸಿರುವ ಆರ್‌ಟಿಇ ಕಾಯಿದೆಯಡಿ ಕೆಲ ಮಕ್ಕಳನ್ನು ಈ ಶಾಲೆಗೆ ಸೇರ್ಪಡೆಗೊಳಿಸಲಾಗಿದೆ. ಈ ಮಕ್ಕಳ ಖರ್ಚನ್ನು ನಿಯಮಾನುಸಾರ ಸರ್ಕಾರವೇ ಬರಿಸುತ್ತದೆ. ಸರ್ಕಾರದಿಂದ ನಿಗದಿತ ಶುಲ್ಕ ಪಡೆಯುತ್ತಿದ್ದರೂ ಇತ್ತ ಪೋಷಕರಿಂದಲೂ ಹಣ ಕೇಳುತ್ತಿದೆ ಎಂದು ದೂರು ನೀಡಿದರು.

‘ಆರ್‌ಟಿಇ ಮೂಲಕ ಪ್ರವೇಶ ಪಡೆದಿರುವ ಮಕ್ಕಳಿಗೆ ಈ ಶಾಲೆಯಲ್ಲಿ ₹ 8,500 ರಿಂದ ₹ 17 ಸಾವಿರವನ್ನು ಶುಲ್ಕವಾಗಿ ಪಡೆದಿದ್ದಾರೆ. ಅದನ್ನು ಪ್ರಶ್ನಿಸಿದರೆ ಹೌದು ನಾವು ಹಾಗೆಯೇ ತೆಗೆದುಕೊಳ್ಳುತ್ತೇವೆ. ಇಷ್ಟವಿದ್ದರೆ ಸೇರಿಸಿ ಇಲ್ಲವಾದರೆ ಕರೆದುಕೊಂಡು ಹೋಗಿ’ ಎಂದು ಉಡಾಫೆಯ ಉತ್ತರ ನೀಡುತ್ತಾರೆ ಎಂದು ದೂರಿನಲ್ಲಿ ತಿಳಿಸಿದರು.

ADVERTISEMENT

ಕ್ಷೇತ್ರ ಶಿಕ್ಷಣಾಧಿಕಾರಿ ಮಾತನಾಡಿ, ‘ಆರ್‌ಟಿಇ ಯೋಜನೆಯಡಿ ದಾಖಲಾದ ಮಕ್ಕಳಿಂದ ಶುಲ್ಕ ಪಡೆಯುವುದು ತಪ್ಪು. ಇದು ಕಾನೂನಿನ ಪ್ರಕಾರ ಅಪರಾಧ. ಈ ಬಗ್ಗೆ ಶಾಲೆಯ ಆಡಳಿತ ಮಂಡಳಿ ಹಾಗೂ ಪೋಷಕರ ಸಭೆಯನ್ನು ಇದೇ ಬುಧವಾರ ನಡೆಸಲಾಗುವುದು. ಇಲ್ಲಿ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗದಿದ್ದರೆ ಜಿಲ್ಲಾಧಿಕಾರಿಗೆ ವರದಿ ನೀಡಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.