ADVERTISEMENT

ಜಿಲ್ಲೆಯಲ್ಲಿ ಅಂತರ್ಜಲ ಕುಸಿತ–ಆತಂಕ

ಮಳೆ ನೀರು ಸಂಗ್ರಹ ಪದ್ಧತಿ ಉದ್ಘಾಟನೆ *ವೈಜ್ಞಾನಿಕ ವಿಧಾನ ಅಳವಡಿಕೆಗೆ ಜಾಗೃತಿ

​ಪ್ರಜಾವಾಣಿ ವಾರ್ತೆ
Published 22 ಮೇ 2014, 8:00 IST
Last Updated 22 ಮೇ 2014, 8:00 IST
ರಾಮನಗರದ ಎಂ.ಎಚ್.ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಮಳೆ ನೀರು ಸಂಗ್ರಹ ಪದ್ಧತಿಯನ್ನು ಪ್ರಭಾರ ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ಅವರೊಂದಿಗೆ ವೀಕ್ಷಿಸಿದ ಕಾಲೇಜಿನ ವಿದ್ಯಾರ್ಥಿಗಳು
ರಾಮನಗರದ ಎಂ.ಎಚ್.ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಮಳೆ ನೀರು ಸಂಗ್ರಹ ಪದ್ಧತಿಯನ್ನು ಪ್ರಭಾರ ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ಅವರೊಂದಿಗೆ ವೀಕ್ಷಿಸಿದ ಕಾಲೇಜಿನ ವಿದ್ಯಾರ್ಥಿಗಳು   

ರಾಮನಗರ: ಮನುಷ್ಯ ಅವೈಜ್ಞಾನಿಕ ಹಾಗೂ ಅಸಮರ್ಪಕವಾಗಿ ನೀರನ್ನು ಬಳಸುತ್ತಿರುವುದರಿಂದ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿತ ಕಂಡಿದೆ ಎಂದು ಪ್ರಭಾರ ಜಿಲ್ಲಾಧಿಕಾರಿಯೂ ಆದ ಜಿಲ್ಲಾ ಪಂಚಾಯತ್ ಸಿಇಒ ಡಾ. ಎಂ.ವಿ.ವೆಂಕಟೇಶ್ ವಿಷಾದಿಸಿದರು.

ನಗರದ ಎಂ.ಎಚ್.ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಮಳೆ ನೀರು ಸಂಗ್ರಹ ಪದ್ಧತಿಯ ಉದ್ಘಾಟನೆ ಹಾಗೂ ಪ್ರಾತ್ಯಕ್ಷಿಕೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಜನಸಂಖ್ಯೆ ಹೆಚ್ಚಾದಂತೆಲ್ಲಾ ಮನುಷ್ಯನ ಅವಶ್ಯಕತೆಗಳೂ ಹೆಚ್ಚಾಗಿವೆ. ನಗರ ಪ್ರದೇಶಗಳ ವ್ಯಾಪ್ಗಿಯೂ ವಿಸ್ತರಿಸುತ್ತಿದೆ. ಕೃಷಿ ಚಟುವಟಿಕೆಯೂ ಹೆಚ್ಚಿದೆ. ಇದರಿಂದ ನೀರಿನ ಬಳಕೆ ಹೆಚ್ಚಿ ಅಂತರ್ಜಲ ಮಟ್ಟ ಕುಸಿಯ­ತೊಡಗಿದೆ. ದೇಶದಲ್ಲಿ ನೀರಿಗಾಗಿ ಹಾಹಾಕಾರ ಎದು-ರಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಹಿಂದೇ 100 ಅಡಿ ಕೊರೆದರೆ ಸಮೃದ್ಧ ನೀರು ದೊರಕುತ್ತಿತ್ತು. ಇಂದು ಸಾವಿರ ಅಡಿ ಕೊರೆದರೂ ನೀರು ದೊರ­ಕುತ್ತಿಲ್ಲ. ಪ್ರತಿ ಕೊಳವೆ ಬಾವಿಗಳ ಬಳಿ ಇಂಗುಗುಂಡಿಗಳನ್ನು ನಿರ್ಮಿಸಿದಲ್ಲಿ ಅಂತ­ರ್ಜಲ ಮಟ್ಟ ಹೆಚ್ಚಿ ಶುದ್ಧ ನೀರು ದೊರೆಯುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಜಿಲ್ಲಾ ಕೇಂದ್ರದಲ್ಲಿ ಕನಿಷ್ಠ 500 ಇಂಗು­ಗುಂಡಿಗಳನ್ನು ನಿರ್ಮಿಸಿದರೆ ವರ್ಷದ 365 ದಿನವೂ ಸುಭಿಕ್ಷವಾಗಿ ನೀರು ಸಿಗುವಂತೆ ಮಾಡಬಹುದು. ಜೊತೆಗೆ ಬೇಸಿಗೆಯಲ್ಲಿನ ನೀರಿನ ಸಮಸ್ಯೆಯೂ ತಪ್ಪುತ್ತದೆ ಎಂದ ಅವರು, ಹರಿಯುವ ನೀರನ್ನು ನಿಲ್ಲಿಸಿ, ನಿಂತ ನೀರು ಇಂಗುವಂತೆ ಮಾಡುವ ಮೂಲಕ ಅಂತರ್ಜಲವನ್ನು ಹೆಚ್ಚಿಸ­ಬೇಕಿದೆ. ವೈಜ್ಞಾನಿಕ ಪದ್ಧತಿಗಳನ್ನು ಬಳಸಿದಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮಾಡಬಹುದು ಎಂದರು.

ವಿದ್ಯಾರ್ಥಿಗಳು, ಅಧಿಕಾರಿಗಳು, ಸಾರ್ವಜನಿಕರು ಸಂಘಟಿತರಾಗಿ ಜಿಲ್ಲೆಯಾದ್ಯಂತ ಮಳೆನೀರು ಸಂಗ್ರಹ ಪದ್ಧತಿ ಕುರಿತು ತಿಳಿವಳಿಕೆ ನೀಡಿ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಕರೆ ನೀಡಿದರು.

ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಗೋಪಿನಾಥ್, ಜಿ.ಪಂ ಎಂಜಿನಿಯರ್‌ ಗೋಪಾಲಕೃಷ್ಣ,  ಎಂ.ಎಚ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಚ್.ಚಂದ್ರಶೇಖರ್, ತೋಟಗಾರಿಕೆ ಇಲಾಖೆಯ ಜಿಲ್ಲಾ ಉಪನಿರ್ದೇಶಕಿ ಎಚ್.ಎನ್.ಹೇಮಾ, ಮಹಿಳಾ ಇಲಾಖೆಯ ನಿರೂಪಣಾ ಅಧಿಕಾರಿ ಸೋಮಲತಾ, ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ದೇವರಾಜ್, ರೋಟರಿ ಸಂಸ್ಥೆಯ ಸುರೇಶ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.