ADVERTISEMENT

ಜು.5ರಂದು ವಿಧಾನಸೌಧ ಚಲೋ

​ಪ್ರಜಾವಾಣಿ ವಾರ್ತೆ
Published 28 ಜೂನ್ 2011, 9:50 IST
Last Updated 28 ಜೂನ್ 2011, 9:50 IST
ಜು.5ರಂದು ವಿಧಾನಸೌಧ ಚಲೋ
ಜು.5ರಂದು ವಿಧಾನಸೌಧ ಚಲೋ   

ಕನಕಪುರ: ಬಗರ್‌ಹುಕುಂ ಸಾಗುವಳಿಯ ಎಲ್ಲಾ ಭೂಮಿಯನ್ನು ಸಕ್ರಮ ಮಾಡಬೇಕು. ಹತ್ತಾರು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಬಗರ್‌ಹುಕುಂ ಭೂಮಿಯ ಸಕ್ರಮಕ್ಕಾಗಿ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿ ಬಹರ್‌ಹುಕುಂ ಸಾಗುವಳಿದಾರರ ಹೋರಾಟ ಸಮಿತಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘ ಜುಲೈ 5ರ   ಬೆಳಿಗ್ಗೆ 11 ಗಂಟೆಗೆ `ವಿಧಾನಸೌಧ ಚಲೋ~ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಜಿಲ್ಲಾ ಸಂಚಾಲಕ ಎಂ.ಶ್ರಿನಿವಾಸ್ ಹೇಳಿದರು.

 ಪಟ್ಟಣದ ಪ್ರವಾಸಿ ಮಂದಿರದ ಬಳಿ ನಡೆಸಿದ ರೈತರ ಸಭೆಯಲ್ಲಿ ಮಾತನಾಡಿದ ಅವರು, ದೀನ ದಲಿತರು, ದುರ್ಬಲರು, ಬಡವರು, ಹತ್ತಾರು ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ಕೃಷಿ ಚಟುವಟಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಅಂಥ ರೈತರ ಭೂಮಿಯನ್ನು ಸಕ್ರಮ ಗೊಳಿಸದೆ ಸರ್ಕಾರ ಅವರಿಂದ ಜಮೀನನ್ನು ಕಬಳಿಸಲು ಹುನ್ನಾರ ನಡೆಸಿ ಕುಟುಂಬಗಳನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಸಿದೆ ಎಂದು ಆರೋಪಿಸಿದರು.

ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲೆಯ 93.11 ಲಕ್ಷ ಎಕರೆಯಷ್ಟು ಭೂಮಿ 37395 ಅರ್ಜಿದಾರರ ಸ್ವಾಧೀನದಲ್ಲಿದೆ. ಇಂಥ ಭೂಮಿಯನ್ನು ಕಬಳಿಸಲು ಸರ್ಕಾರ ಮುಂದಾಗಿದೆ.

ಮತ್ತೊಂದು ಕಡೆ 30-40 ವರ್ಷಗಳಿಂದ ಅನುಭವಿಸುತ್ತಿರುವ ಜಮೀನು ಹಾಗು 20 ವರ್ಷಗಳ ಹಿಂದೆ ಅರ್ಜಿ ಹಾಕಿಕೊಂಡಿರುವವರಿಗೆ ಭೂಮಿ ಮಂಜೂರು ಮಾಡುವ ಬದಲು ಹೊಸ ಕಾನೂನು ಮೂಲಕ 18 ಕಿ.ಮೀಗೆ ಒಳಪಟ್ಟ ಜಮೀನನ್ನು ಸಕ್ರಮ ಮಾಡಬಾರದೆಂಬ ನಿಯಮದಡಿ ಭೂಮಿಯನ್ನು ಕಬಳಿಸಲು ಹೊರಟಿದ್ದಾರೆ.

ಮುಖ್ಯ ಮಂತ್ರಿಗಳು ತವರು ಜಿಲ್ಲೆ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣಕ್ಕಾಗಿ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳವಾಗ ಬಗರ್‌ಹುಕುಂ ಸಾಗುವಳಿದಾರರಿಗೂ ಪರಿಹಾರ ಕೊಡಿಸಿದ್ದಾರೆ. ಅದೇ ರೀತಿ ದೇವನಹಳ್ಳಿಯಲ್ಲಿ ಭೂಮಿಯನ್ನು ಕಳೆದುಕೊಂಡ ಬಹರ್‌ಹುಕುಂ ಸಾಗುವಳಿದಾರರಿಗೂ ಪರಿಹಾರ ನೀಡಬೇಕೆಂದು ಒತ್ತಾಯಿಸಿದ ಅವರು ಇದರ ವಿರುದ್ದ `ಬಗರ್‌ಹುಕುಂ ಸಾಗುವಳಿದಾರರ ಹೋರಾಟ ಸಮಿತಿಯು~ ತಾಲ್ಲೂಕುಗಳಲ್ಲಿ ಜಾಗೃತಿ ಸಭೆ ನಡೆಸುತ್ತಿದೆ ಎಂದರು.

ಸಾಗುವಳಿದಾರರಿಗೆ ಭೂಮಿಯನ್ನು ಸಕ್ರಮಗೊಳಿಸಬೇಕು, ಸ್ವಾಧೀನ ಪಡಿಸಿಕೊಳ್ಳುವ ಭೂಮಿಗೆ ನ್ಯಾಯಯುತ ಪರಿಹಾರ ನೀಡುವಂತೆ ಹೋರಾಟ ಸಮಿತಿ  ಜುಲೈ 5 ರಂದು ಹಮ್ಮಿಕೊಂಡಿರುವ ಬೃಹತ್ `ವಿಧಾನಸೌಧ ಚಲೋ~ ಕಾರ್ಯಕ್ರಮದಲ್ಲಿ ಎಲ್ಲಾ ಸಾಗುವಳಿದಾರರು, ರೈತರು ಪಕ್ಷತೀತವಾಗಿ ಪಾಲ್ಗೊಂಡು  ಚಳುವಳಿಯನ್ನು ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದರು. 

 ಹೊಸಕೋಟೆ ಬಾಬು, ಮಾಗಡಿ ನಾಗೇಶ್, ಆನೇಕಲ್ ರಾಜಣ್ಣ, ಕನಕಪುರದ ಬಿ.ರಾಜಶೇಖರ್‌ಮೂರ್ತಿ ಸೇರಿದಂತೆ ಅನೇಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.