ADVERTISEMENT

ಜೆಡಿಎಸ್‌ ಮೊದಲ ಪಟ್ಟಿ ಬಿಡುಗಡೆ 15ರಂದು: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2017, 9:11 IST
Last Updated 6 ಡಿಸೆಂಬರ್ 2017, 9:11 IST

ರಾಮನಗರ: ಮುಂಬರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇದೇ ತಿಂಗಳ 15ರಂದು ಬಿಡುಗಡೆ ಮಾಡಲಾಗುವುದು ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ನಗರದ ರಾಮದೇವರ ಬೆಟ್ಟದ ತಪ್ಪಲಿನಲ್ಲಿ ನಿರ್ಮಾಣವಾಗಿರುವ ಅಭಯ ಆಂಜನೇಯ ಪ್ರತಿಮೆಗೆ ಮಂಗಳವಾರ ಪೂಜೆ ಸಲ್ಲಿಸಿದ ಬಳಿಕ ಅವರು ಪತ್ರಕರ್ತರ ಜೊತೆ ಮಾತನಾಡಿದರು. ಮೊದಲ ಪಟ್ಟಿಗೆ ತಯಾರಿ ನಡೆಸಿದ್ದು, ಒಂದಕ್ಕಿಂತ ಹೆಚ್ಚು ಆಕಾಂಕ್ಷಿಗಳು ಇರುವ ಕಡೆ ಒಮ್ಮತದ ಅಭ್ಯರ್ಥಿ ಆಯ್ಕೆಗಾಗಿ ಸಭೆಗಳನ್ನು ನಡೆಸುತ್ತಿದ್ದೇನೆ ಎಂದರು.

ಚನ್ನಪಟ್ಟಣದಲ್ಲಿ ಸ್ಥಳೀಯರನ್ನೇ ಅಭ್ಯರ್ಥಿಯಾಗಿ ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸಿ ದ್ದೇನೆ. ಅನಿತಾ ಸ್ಪರ್ಧೆ ಬಗ್ಗೆ ನಿರ್ಧರಿಸಿಲ್ಲ ಎಂದು ಹೇಳಿದರು.
ಅಶಾಂತಿಗೆ ಯತ್ನ: ಹನುಮ ಜಯಂತಿ ನೆಪದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸಮಾಜವನ್ನು ಒಡೆಯುತ್ತಿದ್ದು, ಕೋಮುವಾದ ಪ್ರಚೋದಿಸುತ್ತಿವೆ ಎಂದು ಅವರು ಆರೋಪಿಸಿದರು.

ADVERTISEMENT

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅಣತಿಯಂತೆ ಗಲಭೆ ಸೃಷ್ಟಿಸಲು ಮುಂದಾಗುವುದಾಗಿ ಸಂಸದ ಪ್ರತಾಪ ಸಿಂಹ ನೀಡಿರುವ ಹೇಳಿಕೆಗಳು ವಾಟ್ಸಪ್‌, ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿವೆ. ಇದಕ್ಕೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅಧಿಕಾರಿಗಳಿಗೆ ಎಚ್ಚರಿಕೆ: ರಾಮನಗರ ನಗರಸಭೆ ವ್ಯಾಪ್ತಿಯಲ್ಲಿ ಬಡವರಿಗೆ ನಿವೇಶನಗಳನ್ನು ಹಂಚುವ ನೆಪದಲ್ಲಿ ಕೆಲವರು ಸರ್ಕಾರದ ಹಣ ದೋಚುವ ಯತ್ನ ನಡೆಸಿದ್ದಾರೆ. ಅಧಿಕಾರಿಗಳು ಅವರ ಜೊತೆ ಕೈ ಜೋಡಿಸಿದಲ್ಲಿ ಜೈಲು ಪಾಲಾಗಬೇಕಾಗುತ್ತದೆ ಎಂದು ಕುಮಾರಸ್ವಾಮಿ ಎಚ್ಚರಿಸಿದರು.

ನಾಲ್ಕೈದು ಜನ ಸೇರಿಕೊಂಡು ರೈತರಿಂದ ಅಲ್ಪ ಹಣಕ್ಕೆ ಸುಮಾರು 67 ಎಕರೆ ಜಮೀನು ಖರೀದಿಸಿ ಸರ್ಕಾರಕ್ಕೆ ಎಕರೆಗೆ ಕೋಟಿ ರೂಪಾಯಿಗೆ ಮಾರಲು ಹುನ್ನಾರ ನಡೆಸಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಸಂಬಂಧಿಸಿದ ಆಯ್ಕೆ ಸಮಿತಿ ಸಭೆಯನ್ನು ಮುಂದೂಡುವಂತೆ ಸೂಚಿಸಿದ್ದೇನೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಂಜು, ಅಭಯ ಆಂಜನೇಯ ಸೇವಾ ಸಮಿತಿಯ ಅಧ್ಯಕ್ಷ ಡಿ.ಕೆ. ಶಿವಕುಮಾರ್
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.