ADVERTISEMENT

ದುಷ್ಕೃತ್ಯಕ್ಕೆ ಎಳೆಮಕ್ಕಳ ಬಳಕೆ

ಹೈಕೋರ್ಟ್‌ ನ್ಯಾಯಮೂರ್ತಿ ಹುಲುವಾಡಿ ಜಿ.ರಮೇಶ್ ಆತಂಕ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 9:38 IST
Last Updated 2 ಡಿಸೆಂಬರ್ 2013, 9:38 IST

ರಾಮನಗರ: ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಪೋಷಕರ ಮತ್ತು ಶಿಕ್ಷಕರ ಕರ್ತವ್ಯವಾಗಿದೆ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಹುಲುವಾಡಿ ಜಿ.ರಮೇಶ್ ತಿಳಿಸಿದರು.

ನಗರದ ಗೌಸಿಯಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಾಲನ್ಯಾಯ ಕಾಯಿದೆ 2000 ಹಾಗೂ ಅದರ ನಿಯಮಗಳು 2007ರ ಕುರಿತು ಭಾನುವಾರ ನಡೆದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಕೆಲವು ಸಮಾಜ ಘಾತುಕರು ಪಾಲಕರಿಂದ ದೂರಾಗುವ ಮತ್ತು ಶಾಲೆಗಳಿಗೆ ಹೋಗದ ಮಕ್ಕಳನ್ನು ಗಾಂಜಾ, ಅಫೀಮು ಮತ್ತು ಕಳ್ಳತನ ಮಾಡು ವಂತಹ ದುಷ್ಕೃತ್ಯಕ್ಕೆ ಬಳಕೆ ಮಾಡಿ ಕೊಳ್ಳುತ್ತಿದ್ದಾರೆ. ಈ ರೀತಿಯ ಕೃತ್ಯಗಳು ಹೆಚ್ಚಾಗಿ ಪಟ್ಟಣ ಪ್ರದೇಶದಲ್ಲಿಯೇ ನಡೆಯುತ್ತಿದ್ದು, ಪೊಲೀಸ್ ಇಲಾಖೆ ಈ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ ಎಂದು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪ್ರಹ್ಲಾದ್‌ ಗೌಡ ಮಾತ ನಾಡಿ, ‘ಪ್ರತಿಯೊಬ್ಬರಿಗೂ ಕಾನೂನಿನ ಬಗ್ಗೆ ಅರಿವಿದ್ದರೆ ಮಾತ್ರ ಸುಭದ್ರ ಸಮಾಜದ ನಿರ್ಮಾಣ ಮಾಡಲು ಸಾಧ್ಯ. ಸರ್ಕಾರ ಏನೆಲ್ಲಾ ಸೌಲಭ್ಯ ನೀಡಿ ದರೂ ಶಿಕ್ಷಕರು ಶಾಲೆಗಳಲ್ಲಿ ಗುಣಮ ಟ್ಟದ ಶಿಕ್ಷಣ ನೀಡದಿದ್ದರೆ ಅದು ದೊಡ್ಡ ಅಪರಾಧ ಮಾಡಿದಂತಾಗುತ್ತದೆ ಎಂದು ಅವರು ತಿಳಿಸಿದರು.

ಜಿಲ್ಲಾ ಆಡಳಿತಾತ್ಮಕ ನ್ಯಾಯ ಮೂರ್ತಿ ಕೆ.ಎನ್.ಕೇಶವನಾರಾಯಣ ಮಾತನಾಡಿ, ‘ಇತ್ತೀಚಿನ ಅಪರಾಧ ಪ್ರಕರಣಗಳಲ್ಲಿ ಪಾಲ್ಗೊಳ್ಳುವವರಲ್ಲಿ ಮಕ್ಕಳೇ ಹೆಚ್ಚಾಗಿದ್ದು, ಸಮಾಜದ ಅಶಾಂತಿಗೆ ಕಾರಣವಾಗಿದೆ. ಈ ಹಿನ್ನೆಲೆ ಯಲ್ಲಿ ಪ್ರತಿಯೊಬ್ಬ ಸಾರ್ವಜನಿಕರೂ ತಪ್ಪು ಮಾಡಿದ ಮಕ್ಕಳಿಗೆ ಸರಿ ದಾರಿ ತೋರಬೇಕು’ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಕೆ.ಪ್ರಹ್ಲಾದ್, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಎಚ್.ಹೊಸಗೌಡರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಸ್.ಎಂ.ಚಂದ್ರ, ಜಿಲ್ಲಾ ವಕೀಲರ ಸಂಘದ ಎಂ.ಎಚ್.ಕುಮಾರ್, ಏಕೋ ಸಂಸ್ಥೆ ಮತ್ತು ಬೆಂಗಳೂರು ವಿಶೇಷ ಗೃಹದ ಅಧೀಕ್ಷಕ ಬಿಜು ಥಾಮಸ್, ಜಿಲ್ಲಾ ಮಕ್ಕಳ ರಕ್ಷ ಣಾಧಿಕಾರಿ ಕೆ.ರಾಧಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಶಿಕ್ಷಕ ವಿ. ಲಿಂಗರಾಜು ನಾಡ ಗೀತೆಯನ್ನು ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.