ADVERTISEMENT

‘ದೇಶದಲ್ಲಿ ಅಂಧರ ಸಂಖ್ಯೆ ಹೆಚ್ಚು’

ಜಿಲ್ಲಾ ಆಸ್ಪತ್ರೆಯಲ್ಲಿ ಮಧುಮೇಹ ಮತ್ತು ಕಣ್ಣಿನ ಪೊರೆ ತಪಾಸಣಾ ಶಿಬಿರ

​ಪ್ರಜಾವಾಣಿ ವಾರ್ತೆ
Published 27 ಮೇ 2018, 11:17 IST
Last Updated 27 ಮೇ 2018, 11:17 IST
ಜಿಲ್ಲಾ ಆಸ್ಪತ್ರೆಯಲ್ಲಿ ಶನಿವಾರ ಮಧುಮೇಹ ಮತ್ತು ಕಣ್ಣಿನ ಪೊರೆ ತಪಾಸಣಾ ಶಿಬಿರ ನಡೆಯಿತು
ಜಿಲ್ಲಾ ಆಸ್ಪತ್ರೆಯಲ್ಲಿ ಶನಿವಾರ ಮಧುಮೇಹ ಮತ್ತು ಕಣ್ಣಿನ ಪೊರೆ ತಪಾಸಣಾ ಶಿಬಿರ ನಡೆಯಿತು   

ರಾಮನಗರ: ‘ಜನರಲ್ಲಿ ಕಣ್ಣಿನ ಆರೋಗ್ಯದ ಬಗ್ಗೆ ಕಾಳಜಿ ಇಲ್ಲದಿರುವುದರಿಂದ ಪ್ರಸ್ತುತ ಸಂದರ್ಭದಲ್ಲಿ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತಿವೆ’ ಎಂದು ಜಿಲ್ಲಾ ಆಸ್ಪತ್ರೆಯ ನೇತ್ರಾಧಿಕಾರಿ ರಾಮಚಂದ್ರೇಗೌಡ ಹೇಳಿದರು.

ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಶನಿವಾರ ನಡೆದ ಮಧುಮೇಹ ಮತ್ತು ಕಣ್ಣಿನ ಪೊರೆ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.

ಕಣ್ಣಿನ ಬಗ್ಗೆ ಕಾಳಜಿ ವಹಿಸದೆ ಇರುವುದರಿಂದ ಭಾರತದಲ್ಲಿ ಅಂಧರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿಯೊಬ್ಬರು ಕಣ್ಣಿನ ಆರೋಗ್ಯದ ಪ್ರಾಮುಖ್ಯತೆಯನ್ನು ತಿಳಿದುಕೊಳ್ಳಬೇಕು. ಜತೆಗೆ ಇತರರಿಗೂ ತಿಳಿಸಬೇಕು ಎಂದು ತಿಳಿಸಿದರು.

ADVERTISEMENT

ಮಧುಮೇಹ, ರಕ್ತದೊತ್ತಡ ಇರುವವರು ವರ್ಷಕ್ಕೆ ಎರಡು ಬಾರಿ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸಂಘಸಂಸ್ಥೆಗಳು ಆಯೋಜಿಸುವ ಉಚಿತ ಶಸ್ತ್ರಚಿಕಿತ್ಸಾ ಶಿಬಿರಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು. ಯುವ ಸಮುದಾಯ ಉಚಿತವಾಗಿ ನಡೆಯುವ ಶಿಬಿರಗಳ ದಿನಾಂಕವನ್ನು ತಿಳಿದುಕೊಂಡು ಜನರಿಗೆ ತಿಳಿಸಬೇಕು ಎಂದು ತಿಳಿಸಿದರು.

ಕಣ್ಣುಗಳು ಮಾನವನ ಅತ್ಯಮೂಲ್ಯ ಅಂಗಗಳು, ದೇಹ ರಚನಾ ಶಾಸ್ತ್ರದಲ್ಲಿ ಕಣ್ಣುಗಳಿಗಿರುವಷ್ಟು ಮಹತ್ವ ಬೇರೆ ಅಂಗಗಳಿಗಿಲ್ಲ. ಪ್ರಪಂಚದ ದಿನನಿತ್ಯದ ಆಗುಹೋಗುಗಳನ್ನು ನೋಡಲು ಕಣ್ಣುಗಳ ಸಂರಕ್ಷಣೆಗೆ ಪ್ರಾಮುಖ್ಯತೆ ನೀಡಬೇಕು ಎಂದು ತಿಳಿಸಿದರು.

ಪ್ರತಿಯೊಬ್ಬರು ಕಣ್ಣುಗಳನ್ನು ಸರಂಕ್ಷಣೆ ಮಾಡಿಕೊಳ್ಳಬೇಕು. ಅದು ಜೀವ ರಕ್ಷಣೆ ಮಾಡಿಕೊಂಡಂತೆ; ಮನುಷ್ಯನ ಜೀವನದಲ್ಲಿ ಕಣ್ಣುಗಳು ಇಲ್ಲದಿದ್ದರೆ ಜೀವನ ನಶ್ವರ ಹಾಗೂ ಅಸಹನೀಯವೆನಿಸುತ್ತದೆ. ಕಣ್ಣುಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ನಲವತ್ತರ ನಂತರ ಪ್ರತಿ ಆರು ತಿಂಗಳಿಗೊಮ್ಮೆ ಕಣ್ಣಿನ ತಜ್ಞರನ್ನು ಭೇಟಿಯಾಗಬೇಕು ಎಂದರು.

ಆರ್ಥಿಕವಾಗಿ ಹಿಂದುಳಿದಿರುವ ಜನರು ಚಿಕಿತ್ಸಾ ಶಿಬಿರದಲ್ಲಿ ಚಿಕಿತ್ಸೆ ಪಡೆಯುವಂತಾಗಬೇಕು. ಕೂಲಿ ಕಾರ್ಮಿಕರು, ಬಡಜನರು, ಗ್ರಾಮೀಣ ಪ್ರದೇಶದ ಜನರು ಹಲವು ಕಣ್ಣಿನ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಲು ಸುಮಾರು ₹10 ಸಾವಿರದಿಂದ 15 ಸಾವಿರ ವೆಚ್ಚವಾಗುತ್ತಿದೆ. ಆಸ್ಪತ್ರೆಯಲ್ಲಿ ದುಬಾರಿ ವೆಚ್ಚ ಮಾಡಲು ಕಷ್ಟವಾಗಿದ್ದು, ಇಂತಹ ಆರೋಗ್ಯ ಶಿಬಿರಗಳ ಪ್ರಯೋಜನವನ್ನು ಪಡೆದು ಆರೋಗ್ಯ ಸುಧಾರಿಸಿಕೊಳ್ಳಬೇಕು ಎಂದರು.

ಬೆಂಗಳೂರಿನ ಲಯನ್ಸ್‌ ಕ್ಲಬ್‌, ಚಾರಿಟಬಲ್‌ ಟ್ರಸ್ಟ್‌, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಮಿಂಟೊ ಕಣ್ಣಿನ ಆಸ್ಪತ್ರೆ, ಜಿಲ್ಲಾ ಸಂಚಾರಿ ನೇತ್ರ ಚಿಕಿತ್ಸಾ ಘಟಕದ ಸಹಯೋಗದಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.