ADVERTISEMENT

‘ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ’

ಕೋಟಮಾರನಹಳ್ಳಿ ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ, ವನ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 8 ಜೂನ್ 2017, 11:46 IST
Last Updated 8 ಜೂನ್ 2017, 11:46 IST
ಚನ್ನಪಟ್ಟಣದ ಕೋಟಮರನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಹಾಗೂ ವನ ಮಹೋತ್ಸವ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ತಯಾರಿಸಿದ ಬೀಜದ ಉಂಡೆಗಳ ಪ್ರದರ್ಶನ ಮಾಡಲಾಯಿತು
ಚನ್ನಪಟ್ಟಣದ ಕೋಟಮರನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಹಾಗೂ ವನ ಮಹೋತ್ಸವ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ತಯಾರಿಸಿದ ಬೀಜದ ಉಂಡೆಗಳ ಪ್ರದರ್ಶನ ಮಾಡಲಾಯಿತು   

ತಿಟ್ಟಮಾರನಹಳ್ಳಿ (ಚನ್ನಪಟ್ಟಣ): ‘ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆ’ ಎಂದು ಮಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ್ ಕಿವಿಮಾತು ಹೇಳಿದರು.

ಇಲ್ಲಿಗೆ ಸಮೀಪದ ಕೋಟಮಾರನಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಒಕ್ಕೂಟ ಹಾಗೂ ಗ್ರಾಮ ಪಂಚಾಯತಿ ಸಹಕಾರದೊಂದಿಗೆ ನಡೆದ ವಿಶ್ವ ಪರಿಸರ ದಿನಾಚರಣೆ ಹಾಗೂ ವನ ಮಹೋತ್ಸವವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಯೋಜನಾಧಿಕಾರಿ ನಾರಾಯಣ ಶೆಟ್ಟಿ ಮಾತನಾಡಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಹಲವಾರು ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಬೀಜದ ಉಂಡೆ ತಯಾರಿಸಿ ಅತೀ ಸುಲಭದಲ್ಲಿ ಮರ ಬೆಳೆಸುವ ಪ್ರಯತ್ನ ಮಾಡಲಾಗಿದೆ. ಈಗಾಗಲೇ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಒಂದು ಲಕ್ಷ ಬೀಜದ ಉಂಡೆಯನ್ನು ಸಂಸ್ಥೆಯು ಮಾಡಿದೆ. ಇದೀಗ ಚನ್ನಪಟ್ಟಣ ತಾಲ್ಲೂಕಿನಲ್ಲಿಯೂ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ADVERTISEMENT

ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಸುಹಾಸ್ ಮಾತನಾಡಿ, ರಾಮನಗರ ಜಿಲ್ಲೆಯಲ್ಲಿ ಸಾಲುಮರದ ತಿಮ್ಮಕ್ಕ ಮರಗಳನ್ನು ತಮ್ಮ ಮಕ್ಕಳಂತೆ ಬೆಳೆಸಿದ್ದಾರೆ. ಅವರಷ್ಟು ಸಾಧ್ಯವಾಗದಿದ್ದರೂ ವರ್ಷಕ್ಕೆ ಒಂದು ಗಿಡ ನೆಟ್ಟು ಪರಿಸರ ಉಳಿಸಲು ಮುಂದಾಗಬೇಕು ಎಂದರು.

ನಿವೃತ್ತ ಸಹಾಯಕ ತೋಟಗಾರಿಕೆ ಅಧಿಕಾರಿ ಪುಟ್ಟರಾಜು ಮಾತನಾಡಿ, ತೋಟಗಾರಿಕೆ ಇಲಾಖೆಯಲ್ಲಿ ಮಹಿಳೆಯರಿಗಾಗಿ ಟೆರೆಸ್ ಗಾರ್ಡನ್, ಮನೆ ಕೈ ತೋಟಗಳಿಗೆ ಪ್ರೋತ್ಸಾಹ ಕಾರ್ಯಕ್ರಮಗಳು ಇದ್ದು, ಅಂತಹ ಕಾರ್ಯಕ್ರಮಗಳ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.

**

ಬೀಜದುಂಡೆ ತಯಾರಿ ಹೇಗೆ?
ಸೆಗಣಿ, ಜೇಡಿಮಣ್ಣು, ನೀರು ಮಿಶ್ರ ಮಾಡಿ ಮಣ್ಣಿನ ಉಂಡೆ ಮಾಡಿಕೊಂಡು ಮರ ಆಗುವಂತಹ ಮಾವು, ಹಲಸು, ಹುಣಸೆ ಇತ್ಯಾದಿ ಬೀಜಗಳನ್ನು ಆ ಮಣ್ಣಿನ ಉಂಡೆಯಲ್ಲಿ ಸೇರಿಸಬೇಕು ಎಂದು ಯೋಜನಾಧಿಕಾರಿ ನಾರಾಯಣ ಶೆಟ್ಟಿ ವಿವರಿಸಿದರು.

ನಂತರ ಎರಡು ದಿನ ಬಿಸಿಲಿನಲ್ಲಿ ಒಣಗಿಸಿ ಮಳೆ ಬಂದ ನಂತರ ಸರ್ಕಾರಿ ಜಾಗಗಳಲ್ಲಿ ಹಾಗೂ ಕಾಡಿನ ಮಧ್ಯದಲ್ಲಿ ಹಾಕಬೇಕು. ಇದರಿಂದ ಸುಲಭದಲ್ಲಿ ಕಾಡನ್ನು ಬೆಳೆಸಬಹುದು ಎಂದು ಬೀಜದ ಉಂಡೆಯ ಪ್ರಾಮುಖ್ಯತೆಯನ್ನು ತಿಳಿಸಿದರು.

**

ಪರಿಸರ ದಿನಾಚರಣೆ ಕಾರ್ಯಕ್ರಮ ಒಂದು ದಿನ ಮಾಡುವುದಲ್ಲ. ಅದನ್ನು ನಿರಂತರವಾಗಿ ನಡೆಸಬೇಕು. ಪ್ರಕೃತಿ ಪಾಲನೆ ನಮ್ಮೆಲ್ಲರ ಹೊಣೆ
–ರಮೇಶ್, ಅಧ್ಯಕ್ಷ, ಮಳೂರು ಗ್ರಾಮ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.