ರಾಮನಗರ: `ನನ್ನ ಕರುಳ ಕುಡಿಯನ್ನು ನನ್ನ ವಶಕ್ಕೆ ಒಪ್ಪಿಸಿ' ಎಂದು ಒಂದೆಡೆ ಮಗುವಿನ ಹೆತ್ತ ತಾಯಿ ಮನವಿ ಮಾಡುತ್ತಿದ್ದರೆ, ಮತ್ತೊಂದೆಡೆ `ಮಗುವನ್ನು ಪೋಷಿಸಿ ರಕ್ಷಿಸಿದ್ದರಿಂದ ಅವನನ್ನು ನಮ್ಮ ಬಳಿಯೇ ಇರಲು ಬಿಡಿ' ಎಂದು ಮಗುವಿನ ಸಾಕು ತಾಯಿಯೂ ಆದ ಅತ್ತೆ (ಮಗುವಿನ ತಂದೆಯ ಅಕ್ಕ) ವಿನಂತಿ ಮಾಡುತ್ತಿದ್ದಾರೆ.
ಏಳು ವರ್ಷದ ಬಾಲಕ ಈಗ ಮೂರನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಬಾಲಕನಿಗಾಗಿ ತಾಯಿ ಮತ್ತು ಅತ್ತೆಯ ನಡುವೆ ವ್ಯಾಜ್ಯ ಏರ್ಪಟ್ಟಿದೆ.
ಈ ವ್ಯಾಜ್ಯವು ರಾಮನಗರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಮಂಗಳವಾರ ವಿಚಾರಣೆಗೆ ಬಂದಿದ್ದು, ಸಮಿತಿ ಘಟನೆಯ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.
ಪ್ರಕರಣದ ವಿವರ: ಕನಕಪುರ ತಾಲ್ಲೂಕಿನ ಕರೆಮೇಗಳ ದೊಡ್ಡಿ ಗ್ರಾಮದ ಶಿವಣ್ಣ ಅವರ ಪುತ್ರಿ ಸುಮಾ ಅವರಿಗೆ ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿಯ ನಂಜಾಪುರ ಗ್ರಾಮದ ಕಾಂತರಾಜು ಅವರ ಪುತ್ರ ಶಿವಕುಮಾರ್ (ಚಾಲಕ) ಜತೆ 2004ರ ಮೇ 9ರಂದು ವಿವಾಹವಾಗಿತ್ತು.
ಮದುವೆಯಾಗಿ 18 ತಿಂಗಳಾಗಿದ್ದಾಗ ಬೆಂಗಳೂರಿನಲ್ಲಿ ನಡೆದ `ಕಾಲ್ ಸೆಂಟರ್' ಉದ್ಯೋಗಿ ಪ್ರತಿಭಾ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಶಿವಕುಮಾರ್ ಅವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದ ಪರಿಣಾಮ ಆತ ಜೈಲಿನಲ್ಲಿದ್ದಾನೆ. ಈ ಘಟನೆ ನಡೆಯುವ ವೇಳೆಗೆ ಸುಮಾ ಅವರು ಆರು ತಿಂಗಳ ಗರ್ಭಿಣಿಯಾಗಿದ್ದರು. ಅವರಿಗೆ 2006ರ ಮಾರ್ಚ್ 28ರಂದು ಗಂಡು ಮಗು ಜನಿಸಿದೆ.
ದೂರಿನಲ್ಲಿ ಏನಿದೆ:`ಮಗುವನ್ನು ಆರಂಭದ ನಾಲ್ಕು ವರ್ಷ ನಾನೇ ಸಲಹಿದ್ದೇನೆ. ಮಗುವಿನ ಪಾಲನೆ ಮತ್ತು ನನ್ನ ಭವಿಷ್ಯಕ್ಕಾಗಿ ಹಣದ ಸಮಸ್ಯೆಯಾಗಿತ್ತು. ಆಗ ಬೆಂಗಳೂರಿನ ಖಾಸಗಿ ಕಾರ್ಖಾನೆಯಲ್ಲಿ ಕೂಲಿ ಕೆಲಸಕ್ಕೆ ಸೇರಿಕೊಂಡೆ. ಆ ಸಂದರ್ಭದಲ್ಲಿ ಮಗುವನ್ನು ನೋಡಿಕೊಳ್ಳಲು ಆಗುತ್ತಿರಲಿಲ್ಲ. ಆಗ ನನ್ನ ಗಂಡನ ಅಕ್ಕ ಕೆಂಪಾಜಮ್ಮ ಮತ್ತು ಅವರ ಪತಿ ನಾಗೇಶ್ ಅವರು ತಾವೇ ಮಗುವನ್ನು ಸಲವುದಾಗಿ ಹೇಳಿ ಕರೆದುಕೊಂಡು ಹೋದರು. ವಾರಕ್ಕೆ, 15 ದಿನಕ್ಕೊಮ್ಮೆ ಹೋಗಿ ಮಗುವನ್ನು ನೋಡಿಕೊಂಡು ಬರುತ್ತಿದೆ. ಕಳೆದ ಮೇ ಅಂತ್ಯದಿಂದ ನಾನು ಕೆಲಸಕ್ಕೆ ಹೋಗುವುದು ಬಿಟ್ಟಿದ್ದೇನೆ. ಮಗುವನ್ನು ನಾನೇ ಸಾಕಲು ನಿರ್ಧರಿಸಿದ್ದೇನೆ. ಆದರೆ ನನ್ನ ಮಗುವನ್ನು ಕೊಡಲು ಕೆಂಪಾಜಮ್ಮ ಮತ್ತು ನಾಗೇಶ್ ಅವರು ಒಪ್ಪುತ್ತಿಲ್ಲ. ಆದ್ದರಿಂದ ಹೆತ್ತ ಮಗುವನ್ನು ನನಗೆ ಒದಗಿಸಿ, ನ್ಯಾಯ ದೊರಕಿಸಿಕೊಡಿ' ಎಂದು ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.
ಈ ಸಂಬಂಧ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳ ಕಲ್ಯಾಣ ಸಮಿತಿ ಮತ್ತು ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಮಂಗಳವಾರ ಮಗು, ಹೆತ್ತ ತಾಯಿ ಹಾಗೂ ಸಾಕು ತಾಯಿಯ ಕೌನ್ಸೆಲಿಂಗ್ ಮಾಡಿದ್ದಾರೆ. ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಶಿವಲಿಂಗಯ್ಯ ಅವರು ಪ್ರಕರಣದ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದ್ದಾರೆ.
`ಮಕ್ಕಳ ಕಲ್ಯಾಣ ಸಮಿತಿಯ ಬಹುತೇಕ ಸದಸ್ಯರು ಮತ್ತು ಅಧ್ಯಕ್ಷರು ಬುಧವಾರ ಸೇರಲಿದ್ದು, ಅಲ್ಲಿ ವಿಚಾರಣೆ ನಡೆಸಲಾಗುವುದು. ನಂತರ ಎಲ್ಲ ಸದಸ್ಯರು ಪರಸ್ಪರ ಚರ್ಚಿಸಿ ಕಾನೂನು ಪ್ರಕಾರ ಏನು ಮಾಡಬಹುದು ಎಂದು ನಿರ್ಧರಿಸಲಾಗುವುದು' ಎಂದು ಶಿವಲಿಂಗಯ್ಯ ಸುದ್ದಿಗಾರರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.