ADVERTISEMENT

ಬ್ರಾಹ್ಮಣರಲ್ಲೂ ಬಡವರಿದ್ದಾರೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 19:30 IST
Last Updated 17 ಜುಲೈ 2012, 19:30 IST

ರಾಮನಗರ: ಬ್ರಾಹ್ಮಣರೆಲ್ಲರೂ ಸ್ಥಿತಿವಂತರಲ್ಲ. ಅವರಲ್ಲೂ ಆರ್ಥಿಕವಾಗಿ ಹಿಂದುಳಿದವರಿದ್ದು, ಅವರನ್ನು ಗುರುತಿಸಬೇಕಾದ ಅಗತ್ಯವಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಾಜಿ ಪ್ರಧಾನ ಕಾರ್ಯದರ್ಶಿ ಆರ್.ಲಕ್ಷ್ಮೀಕಾಂತ್ ಅಭಿಪ್ರಾಯಪಟ್ಟರು.

ನಗರದ ಅರ್ಕೇಶ್ವರ ಸ್ವಾಮಿ ದೇವಾಲಯದಲ್ಲಿ ರಾಮನಗರದ ವಿಪ್ರ ಮಹಿಳಾ ಮಂಡಳಿ ಆಯೋಜಿಸಿದ್ದ 12ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಅಸಹಾಯಕರನ್ನು ಪ್ರೋತ್ಸಾಹಿಸಿ ಚೈತನ್ಯ ತುಂಬುವ ಮುಖೇನ ಸಮಾಜದ ಪ್ರಗತಿಗೆ ಶ್ರಮಿಸುವುದು ಆಯಾ ಸಮುದಾಯದ ಸಂಘ ಸಂಸ್ಥೆಗಳ ಜವಾಬ್ದಾರಿಯಾಗಿದೆ. ಹಾಗೆಯೇ ಯಾವುದೇ ಸಂಘವು ಕಾರ್ಯಭಾರದಿಂದ ಹಾಗೂ ಉತ್ತಮ ಚಟುವಟಿಕೆಯಿಂದ ಕೂಡಿದ್ದರೆ ಮಾತ್ರ ಅಂತಹ ಸಂಘಗಳು ಬೃಹತ್ ಪ್ರಮಾಣದಲ್ಲಿ ಬೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ 12 ವರ್ಷಗಳಿಂದ ಮಹಿಳೆಯರನ್ನು ಸಂಘಟಿಸಿ ಉತ್ತಮ ಅಭಿಪ್ರಾಯದೊಂದಿಗೆ ಸಾಗುತ್ತಿರುವ ವಿಪ್ರ ಮಹಿಳಾ ಮಂಡಳಿಯ ಕ್ರಿಯಾಶೀಲ ಕಾರ್ಯವೈಖರಿ ಪ್ರಶಂಸನೀಯ ಎಂದರು.

ಬೆಂಗಳೂರು ನಗರ ಬ್ರಾಹ್ಮಣ ಮಹಾಸಭಾದ ಮಾಜಿ ಸಭಾಪತಿ ರಾಜಶೇಖರ್ ಜಿ.ರಾವ್ ಮಾತನಾಡಿ, `ರಾಮನಗರ ನನ್ನ ಜನ್ಮಸ್ಥಳವಾಗಿರುವುದರಿಂದ ಹುಟ್ಟೂರಿನ ವಿಪ್ರ ಸಮುದಾಯದ ಏಳಿಗೆಗೆ ಮುಂದಿನ ದಿನಗಳಲ್ಲಿ ಪರಿಣಾಮಕಾರಿ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತೇನೆಂದು~ ಭರವಸೆ ನೀಡಿದರು.

 ಇದೇ ಸಂದರ್ಭದಲ್ಲಿ ಅವರು 5 ಹೊಲಿಗೆ ಯಂತ್ರಗಳನ್ನು ವಿಪ್ರ ಮಹಿಳೆಯರಿಗೆ ಉಚಿತವಾಗಿ ನೀಡಿದರು. ವಿದುಷಿ ವಸಂತ ಮಾಧವಿ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ವಿಪ್ರ ಮಹಿಳಾ ಮಂಡಳಿ ಅಧ್ಯಕ್ಷಿಣಿ ಸರಸ್ವತಿ ರಾಮ್‌ಗೋಪಾಲ್ ಸ್ವಾಗತಿಸಿದರು. ಸಮಿತಿ ಸದಸ್ಯರುಗಳಾದ ವೀಣಾ ದೇಶಪಾಂಡೆ ಮತ್ತು ಎಂ.ಆರ್.ವಿಜಯಾ ಪ್ರಾರ್ಥಿಸಿದರು. ಲಕ್ಷ್ಮೀ ಕಾಶಿನಾಥ ಅವರು ಸಂಘದ ವಾರ್ಷಿಕ ವರದಿ ಮಂಡಿಸಿದರು. ಸುಧಾ ದೇಶಪಾಂಡೆ ನಿರೂಪಿಸಿದರು. ಮಂಡಳಿಯ ಪ್ರಧಾನ ಕಾರ್ಯದರ್ಶಿ ಜೆ.ಶಾಂತಾಬಾಯಿ ವಂದಿಸಿದರು.

ತಾಲ್ಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಆರ್.ಜಿ.ಚಂದ್ರಶೇಖರ್, ಶಂಕರ ಸೇವಾ ಸಮಿತಿ ಮಾಜಿ ಕಾರ್ಯದರ್ಶಿ ಕೆ.ಎಲ್.ಶೇಷಗಿರಿ ರಾವ್, ವಿಪ್ರ ಮಹಿಳಾ ಮಂಡಳಿ ಉಪಾಧ್ಯಕ್ಷರುಗಳಾದ ಸುಮತಿ ಹೇರ್ಳೆ, ಲೀಲಾಮಣಿ ಅನಂತು, ನಾಗರತ್ನ ಲಕ್ಷ್ಮಣ ರಾವ್, ಶಾಂತಾ ಭಟ್ಟ, ಲಲಿತಾ ಪರಮೇಶ್ವರ, ಖಜಾಂಚಿ ರತ್ನಾಮಣಿ ನಾಗಭೂಷಣ, ವಿಪ್ರ ಯುವ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ರವೀಂದ್ರ ಹೇರ್ಳೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.