ADVERTISEMENT

ಮಾನಸಿಕ ಬೆಳವಣಿಗೆಗೆ ಕ್ರೀಡೆ ಅವಶ್ಯಕ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2011, 19:30 IST
Last Updated 29 ಅಕ್ಟೋಬರ್ 2011, 19:30 IST

ಚನ್ನಪಟ್ಟಣ: `ವಿವಿಧ ವೃತ್ತಿಗಳಲ್ಲಿ ತೊಡಗಿಸಿ ಕೊಂಡಿರುವ ವ್ಯಕ್ತಿಗಳು ಒಟ್ಟಾಗಿ ಸೇರಿ ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಕ್ರೀಡಾ ಮನೋಭಾವ ಪ್ರದರ್ಶಿಸುತ್ತಿರುವುದು ಸ್ವಾಗತಾರ್ಹ~ ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ರುದ್ರಮುನಿ ಶ್ಲಾಘಿಸಿದರು.

ತಾಲ್ಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಪ್ ಕ್ರಿಕೆಟ್ ಪಂದ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ರೀಡೆಯು ಮನುಷ್ಯನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವಾಗಿದೆ. ಇದು ಎಲ್ಲಾ ರೀತಿಯ ಜನರಿಗೂ ಅವಶ್ಯಕ ಎಂದು ತಿಳಿಸಿದ ರುದ್ರಮುನಿ, ಪತ್ರಕರ್ತರ ಸಂಘವು ಪ್ರತಿವರ್ಷ ವಿವಿಧ ಇಲಾಖೆಗಳನ್ನು ಒಳಗೊಂಡಂತೆ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಕ್ರಿಕೆಟ್ ಪಂದ್ಯದಲ್ಲಿ ಮಾಧ್ಯಮ ತಂಡ, ಕಂದಾಯ ಇಲಾಖಾ ತಂಡ, ಪೊಲೀಸ್ ಇಲಾಖಾ ತಂಡ ಹಾಗೂ ಶಿಕ್ಷಣ ಇಲಾಖಾ ತಂಡ ಭಾಗವಹಿಸಿ ತಲಾ ಮೂರು ಪಂದ್ಯಗಳನ್ನಾಡಿದರು. ಅಂತಿಮವಾಗಿ ಪೊಲೀಸ್ ಇಲಾಖಾ ತಂಡ ಜಯಿಸಿ `ರಾಜ್ಯೋತ್ಸವ ಕಪ್~ ಪಡೆಯಿತು.

ತಾಲ್ಲೂಕು ದೈಹಿಕ ಶಿಕ್ಷಣ ಸಂಯೋಜನಾಧಿಕಾರಿ ಕೆಂಪರಾಜು ಪಂದ್ಯದ ಉಸ್ತುವಾರಿವಹಿಸಿದ್ದರು. ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ದೈಹಿಕ ಶಿಕ್ಷಕ ಪ್ರದೀಪ್‌ಕುಮಾರ್, ನಿವೃತ್ತ ದೈಹಿಕ ಶಿಕ್ಷಕ ಶ್ರೀನಿವಾಸ್, ಫರ‌್ಹಾ ಶಾಲೆಯ ದೈಹಿಕ ಶಿಕ್ಷಕ ರಾಜು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.

ಕ್ರಿಕೆಟ್ ಉದ್ಘಾಟನೆ ವೇಳೆ ಅಪರ ಸಿವಿಲ್ ನ್ಯಾಯಾಧೀಶ ಗಣಪತಿ ಪ್ರಶಾಂತ್, ತಹಶೀಲ್ದಾರ್ ಅರುಣಪ್ರಭ, ಬಿಇಓ ಶಿವಪ್ಪ, ವೃತ್ತ ನಿರೀಕ್ಷಕ ಎಂ. ಎಚ್. ಖಾನ್, ಪ್ರಾಂಶುಪಾಲ ಶಿವರಾಮೇಗೌಡ, ರಘುನಂದನ್‌ರಾಮಣ್ಣ, ನಗರಸಭಾ ಆಯುಕ್ತ ರಾಮಚಂದ್ರಯ್ಯ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎಚ್. ಪ್ರಕಾಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.