ADVERTISEMENT

ಮೂರು ವರ್ಷದಲ್ಲಿ, 7ಬಾರಿ ಮತದಾನ!

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2011, 7:30 IST
Last Updated 14 ಮಾರ್ಚ್ 2011, 7:30 IST

ರಾಮನಗರ: ‘ಗೊಂಬೆಗಳ ನಗರ’ ಖ್ಯಾತಿಯ ಚನ್ನಪಟ್ಟಎಸ್. ಸಂಪತ್ಣಕ್ಕೆ ಇದೀಗ ಮತ್ತೊಂದು ಚುನಾವಣೆ ಎದುರಾಗಿದೆ. ಇದರಿಂದಾಗಿ ಈ ಭಾಗದ ಮತದಾರರು ಕೇವಲ ಮೂರು ವರ್ಷದಲ್ಲಿ ಏಳನೇ ಬಾರಿಗೆ ಮತ ಚಲಾಯಿಸುವ ಅಧಿಕಾರ ಪಡೆದಂತಾಗಿದೆ ! ಇದರಲ್ಲಿ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಮೂರನೇ ಬಾರಿ ಮತ ನೀಡುವ ಹಕ್ಕು ದೊರೆತಂತಾಗಿದೆ !

ರಾಜ್ಯದ ಬೇರೆ ಕ್ಷೇತ್ರಗಳ ಜನತೆ ಈ ಮೂರು ವರ್ಷಗಳ ಅವಧಿಯಲ್ಲಿ ಐದು ಬಾರಿ ಮತಚಾಲಯಿಸುವ ಹಕ್ಕು ಪಡೆದಿದ್ದರೆ, ಕೆಲವೇ ಕ್ಷೇತ್ರಗಳ ಜನತೆಗೆ ಆರು ಬಾರಿ ಮತ ಚಲಾಯಿಸುವ ಅಧಿಕಾರ ದೊರೆತಿದೆ. ಆದರೆ ಇವೆಲ್ಲವನ್ನೂ ಮೀರಿಸಿ ಚನ್ನಪಟ್ಟಣದ ಮತದಾರರಿಗೆ ಏಳನೇ ಬಾರಿ ಮತ ಚಲಾಯಿಸುವ ಅಧಿಕಾರ ದೊರೆತಿದೆ.

ಹೌದು, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿರುವುದರ ಪರಿಣಾಮ ಇಲ್ಲಿನ ಮತದಾರರಿಗೆ ಮೂರೇ ವರ್ಷದಲ್ಲಿ ಏಳನೇ ಬಾರಿ ಮತದಾನದ ಮಾಡುವ ಹಕ್ಕು ಲಭ್ಯವಾಗಿದೆ.

ಬೇರೆ ವಿಧಾನಸಭಾ ಕ್ಷೇತ್ರಗಳ ಮತದಾರರಿಗಿಂತ ಹೆಚ್ಚು ಬಾರಿ ಮತ ಚಲಾಯಿಸುವ ಹಕ್ಕು ಇಲ್ಲಿನ ಜನತೆಗೆ ದೊರೆತಿರುವುದಕ್ಕೆ ಕಾರಣ ಏನೆಂದರೆ, ಈ ವಿಧಾನಸಭಾ ಕ್ಷೇತ್ರಕ್ಕೆ ಎದುರಾಗುತ್ತಿರುವ ಎರಡನೇ ಉಪ ಚುನಾವಣೆ ಇದಾಗಿದೆ.

ಏಳು ಬಾರಿ ಹೇಗೆ: 2008ರಲ್ಲಿ ನಡೆದ ವಿಧಾನಸಭಾ ಚುನಾವಣೆ, 2009ರಲ್ಲಿ ನಡೆದ ಲೋಕಸಭಾ ಚುನಾವಣೆ, ಅದೇ ವರ್ಷದಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ಎದುರಾದ ಉಪ ಚುನಾವಣೆ, 2010ರಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಹಾಗೂ ಅದೇ ವರ್ಷದ ಅಂತ್ಯದಲ್ಲಿ ನಡೆದ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಮತ ಚಲಾಯಿಸಿ ಜನಪ್ರತಿನಿಧಿಗಳನ್ನು ಆರಿಸಿರುವ ಮತದಾರರಿಗೆ ಈಗ ಮತ್ತೊಂದು ವಿಧಾನಸಭಾ ಉಪ ಚುನಾವಣೆ ಬಂದಿದೆ.

ಇದಕ್ಕೂ ಮತ ಚಲಾಯಿಸುವುದರಿಂದ ಈ ಕ್ಷೇತ್ರದ ಮತದಾರರು ಕೇವಲ ಮೂರು ವರ್ಷದಲ್ಲಿ ಒಟ್ಟು ಏಳು ಬಾರಿ ಮತ ಚಲಾಯಿಸಿದಂತೆ ಆಗುತ್ತದೆ. ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೂರನೇ ಬಾರಿ ಮತ ಚಲಾಯಿಸುವ ಅವಕಾಶ ಇಲ್ಲಿನ ಮತದಾರರಿಗೆ ದೊರೆತಂತಾಗಿದೆ.

ವಿಧಾನಸಭಾ ಅವಧಿ ಮುಕ್ತಾಯವಾಗುವುದಕ್ಕೆ ಇನ್ನೂ ಎರಡು ವರ್ಷ ಇರುವಾಗಲೇ ಎರಡನೇ ಉಪ ಚುನಾವಣೆ ಎದುರಿಸುತ್ತಿರುವುದು ಹಾಗೂ ಮೂರನೇ ಬಾರಿ ಮತ ಚಲಾಯಿಸುವ ಅವಕಾಶ ದೊರೆತಿರುವುದಕ್ಕೆ ಕ್ಷೇತ್ರದ ಕೆಲ ಮತದಾರರಲ್ಲಿ ಸಂತಸ ಇದ್ದರೆ ಇನ್ನೂ ಪ್ರಜ್ಞಾವಂತ ಮತದಾರರಲ್ಲಿ ಬೇಸರ ಇದೆ.

ನಾಚಿಕೆಗೇಡು: ‘ಚನ್ನಪಟ್ಟಣದಲ್ಲಿ ಚುನಾವಣೆಗೆ ಅರ್ಥವೇ ಇಲ್ಲ ಎಂಬಂತಾಗಿದೆ. ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಗೆದ್ದವರು ಯಾವುದೇ ರೀತಿಯ ಅಭಿವೃದ್ಧಿ ಕೆಲಸವನ್ನು ಇಲ್ಲಿ ಮಾಡಿಲ್ಲ. ಬದಲಿಗೆ ಆಸೆ, ಆಮಿಷಗಳಿಗೆ ಒಳಗಾಗಿ ‘ಆಪರೇಷನ್ ಕಮಲ’ಕ್ಕೆ ಇಬ್ಬರೂ ಶಾಸಕರು ಒಳಗಾದರು. ಇವರು ಮಾಡಿದ ಪಾಪ ಕಾರ್ಯದಿಂದ ನಮ್ಮ ಕ್ಷೇತ್ರಕ್ಕೆ ಮತ್ತೊಂದು ಉಪ ಚುನಾವಣೆ ಎದುರಾಗಿರುವುದು ಬೇಸರ ಮೂಡಿಸಿದೆ’ ಎಂದು ಚನ್ನಪಟ್ಟಣ ಪ್ರಜೆ ಎಂ.ಕೆ.ಪ್ರಶಾಂತ್ ಹೇಳುತ್ತಾರೆ.

‘ಬ್ಯಾನರ್, ಬಂಟಿಂಗ್ಸ್ ಮಾಡುವವರಿಗೆ, ಚುನಾವಣಾ ಪ್ರಚಾರದಲ್ಲಿ ತೊಡಗುವ ಕಾರ್ಯಕರ್ತರಿಗೆ ರಾಜಕೀಯವಾಗಿ ಬೆಳೆಯ ಬಯಸುವವರಿಗೆ ಈ ರೀತಿಯ ಚುನಾವಣೆಯ ಮೇಲೆ ಚುನಾವಣೆಗಳು ಬರುವುದು ಸಂತಸ ನೀಡಬಹುದು. ಆದರೆ ಒಂದೇ ಸ್ಥಾನಕ್ಕೆ ಮೂರನೇ ಬಾರಿ ಚುನಾವಣೆ ನಡೆಯುತ್ತಿರುವುದು ಮತ್ತು ಅದಕ್ಕೆ ಮತ ಚಲಾಯಿಸಬೇಕಾಗಿರುವುದು ನಮ್ಮ ದುರ್ದೈವವೇ ಸರಿ. ಇದು ಪ್ರಜ್ಞಾವಂತ ನಾಗರಿಕರಿಗೆ ನಾಚಿಕೆಗೇಡಿನ ಸಂಗತಿ ಎಂದರೆ ತಪ್ಪಾಗದು’ ಎಂದು ಅವರು ಅಭಿಪ್ರಾಯ ಪಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.