ರಾಮನಗರ: ಇಲ್ಲಿನ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಜಾನಪದ ಲೋಕದ ಎದುರುಗಿರುವ `ಯು~ ತಿರುವು ಅಪಘಾತಗಳ ಬಲಿಪೀಠದಂತಾಗಿದ್ದು ತಿಂಗಳಿಗೆ ಕನಿಷ್ಠ ಒಬ್ಬರಾದರೂ ಇಲ್ಲಿ ಸಾವನ್ನಪ್ಪುತ್ತಿದ್ದು ವಾಹನ ಸವಾರರಿಗೆ ಮೃತ್ಯುಕೂಪವಾಗಿದೆ.
ಮೊದಲೇ ಅವೈಜ್ಞಾನಿಕ ಮತ್ತು ಅನಧಿಕೃತವಾಗಿ ಇರುವ ಈ `ಯು~ ತಿರುವಿನಲ್ಲಿ ಸಂಭವಿಸಿರುವ ಅಪಘಾತಗಳು ದಿನೇ ದಿನೇ ಆತಂಕ ಮೂಡಿಸುವ ರೀತಿಯಲ್ಲಿ ಹೆಚ್ಚುತ್ತಿವೆ. ಇಲ್ಲಿ ನಡೆದ ಅಪಘಾತಗಳಿಂದ ಬಹಳಷ್ಟು ಜನರು ಶಾಶ್ವತವಾಗಿ ಅಂಗವಿಕಲರಾಗಿದ್ದಾರೆ.
ನಿತ್ಯ ಒಂದಿಲ್ಲೊಂದು ಅಪಘಾತವಾಗುವ ಇಲ್ಲಿ ಮೂರು-ನಾಲ್ಕು ವರ್ಷದಲ್ಲಿ ಕನಿಷ್ಠ 24 ಜನ ಸಾವನ್ನಪ್ಪಿದ್ದಾರೆ. ನೂರಾರು ಜನ ಶಾಶ್ವತವಾಗಿ ಅಂಗವೈಕಲ್ಯಕ್ಕೆ ತುತ್ತಾಗಿ ನರಳುತ್ತಿದ್ದಾರೆ ಎಂಬ ಅಂಕಿ ಅಂಶಗಳು ಸಂಚಾರ ಪೊಲೀಸರಿಂದ ದೊರೆಯುತ್ತವೆ.
ಮೃತ್ಯಕೂಪದಂತಿರುವ ತಿರುವು !: ಇತ್ತೀಚೆಗೆ ತಾನೆ ಜಲಾನಯನ ಅರಣ್ಯ ವಿಭಾಗದ ಆರ್‌ಎಫ್‌ಒ ವೆಂಕಟರಾಜು ಅವರ ಬೈಕ್‌ಗೆ ಇದೇ `ಯು~ ತಿರುವಿನಲ್ಲಿ ಮೈಸೂರು ಕಡೆಯಿಂದ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆಯಿತು. ಇದರ ಪರಿಣಾಮ ಅವರ ಸ್ಥಳದಲ್ಲಿಯೇ ಅಸುನೀಗಿದರು.
ಇದಕ್ಕೂ ಮೂರು ತಿಂಗಳ ಹಿಂದೆ ಇದೇ ಸ್ಥಳದಲ್ಲಿ ಸಂಭವಿಸಿದ ಅಪಘಾತದಲ್ಲಿ ಮೊಟ್ಟೆದೊಡ್ಡಿಯ ಬಡ ಯುವಕ ಕಾಲುಗಳನ್ನು ಕಳೆದುಕೊಂಡು ಶಾಶ್ವತ ಅಂಗವಿಕಲನಾಗಿದ್ದಾನೆ. ಇವೆಲ್ಲಾ ತಾಜಾ ಉದಾಹರಣೆಗಳಷ್ಟೆ. 2009ರಲ್ಲಿ ಐದು, 2010ರಲ್ಲಿ ಎಂಟು ಮತ್ತು 2011ರಲ್ಲಿ ಎಂಟು ಜನ ಇಲ್ಲಿ ಸಾವನ್ನಪ್ಪಿದ್ದಾರೆ. ಒಂದು ಅರ್ಥದಲ್ಲಿ ಈ `ಯು~ ತಿರುವು ಅಕ್ಷರಶಃ ಮೃತ್ಯು ಕೂಪವಾಗಿ ಪರಿಣಮಿಸಿದೆ ಎಂದು ಜನರು ದೂರುತ್ತಾರೆ.
ಅವೈಜ್ಞಾನಿಕ ಮತ್ತು ಅನಧಿಕೃತವಾಗಿರುವ ಈ ತಿರುವನ್ನು ಮುಚ್ಚಲು ಪೊಲೀಸರಿಂದಲೂ ಸಾಧ್ಯವಾಗಿಲ್ಲ. ಇದಕ್ಕೆ ಜಾನಪದ ಲೋಕದ ಪಕ್ಕದಲ್ಲೇ ಇರುವ ಖಾಸಗಿ ಹೋಟೆಲ್‌ನ ಲಾಬಿಯೇ ಪ್ರಮುಖ ಕಾರಣ ಎಂದು ತಿಳಿದು ಬಂದಿದೆ.
ಅಪಘಾತಗಳು ನಡೆದು ಸಾವುಗಳು ಸಂಭವಿಸಿದ ಒಂದೆರಡು ದಿನ ಮಾತ್ರ ಪೊಲೀಸರು ಅಲ್ಲಿ ತಾತ್ಕಾಲಿಕವಾಗಿ ರಸ್ತೆ ವಿಭಜಕ ಅಳವಡಿಸುತ್ತಾರೆ. ಆದರೆ ಹೋಟೆಲ್ ಉದ್ಯಮದ ಲಾಬಿಯಿಂದ ಅದು ಕೂಡಲೇ ತೆರವಾಗಿ ಪುನಃ ವಾಹನಗಳು ಅತ್ತಿಂದಿತ್ತ, ಇತ್ತಿಂದತ್ತ ಚಲಿಸಿ, ಅಪಘಾತಕ್ಕೆ ಆಹ್ವಾನ ಕಲ್ಪಿಸುತ್ತದೆ.
ಹೆದ್ದಾರಿಯಲ್ಲಿ ಚಲಿಸುವ ವಾಹನಗಳನ್ನು ಆಕರ್ಷಿಸುವ ಈ ಹೋಟೆಲಿನ ಲಾಭದಾಸೆಗೆ ಅಮಾಯಕ ಜನರು ಬಲಿಯಾಗುತ್ತಿದ್ದಾರೆ. ಜನತೆಯ ಪ್ರಾಣದ ಜತೆ ಚೆಲ್ಲಾಟವಾಡಿಕೊಂಡು ಹೋಟೆಲ್ ಉದ್ಯಮ ನಡೆಸುವ ಅಗತ್ಯವಿದೆಯೇ ಎಂದು ಪ್ರಜ್ಞಾವಂತ ನಾಗರಿಕರು ಪ್ರಶ್ನಿಸುತ್ತಾರೆ.
ಫಲಕೊಡದ ಪೊಲೀಸರ ಪ್ರಯತ್ನ: ಈ `ಯು~ ತಿರುವು ಅವೈಜ್ಞಾನಿಕ ಮತ್ತು ಅನಧಿಕೃತ ಎಂಬುದನ್ನು ಸಂಚಾರ ಪೊಲೀಸರೇ ಒಪ್ಪಿಕೊಳ್ಳುತ್ತಾರೆ. ಇಲ್ಲಿನ `ಯು~ ತಿರುವಿನ ಬಳಿ ಯಾವುದೇ ಗ್ರಾಮಗಳಿಗೆ ಹೋಗುವ ರಸ್ತೆಗಳ ಸಂಪರ್ಕ ಇಲ್ಲ.
ಜಾನಪದ ಲೋಕದ ಪಕ್ಕದ ಹೋಟೆಲ್ ಮಾಲೀಕರು ತಮಗೆ ಅನುಕೂಲವಾಗುವ ದೃಷ್ಟಿಯಿಂದ ಈ ತಿರುವು ನಿರ್ಮಿಸಿಕೊಂಡಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುವ ಬದಲಿಗೆ ಅನಾನುಕೂಲವೇ ಹೆಚ್ಚಾಗಿದೆ. ಈಗಾಗಲೇ ಇಲ್ಲಿ ಸಾಕಷ್ಟು ಸಾವು ನೋವುಗಳು ಸಂಭವಿಸಿವೆ. ಹಾಗೇ ಬಿಟ್ಟರೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ಸಂಭವಿಸುವ ಸಾಧ್ಯತೆಗಳಿವೆ. ಆದ್ದರಿಂದ ಈ `ಯು~ ತಿರುವನ್ನು ಶಾಶ್ವತವಾಗಿ ಮುಚ್ಚಿಸಲು ಕ್ರಮ ತೆಗೆದುಕೊಳ್ಳುವಂತೆ ರಾಮನಗರದ ಸಂಚಾರ ಪೊಲೀಸರು ಲೋಕೋಪಯೋಗಿ ಇಲಾಖೆ ಮತ್ತು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಡಿಸಿಎಲ್) 2011ರ ಅಕ್ಟೋಬರ್‌ನಲ್ಲಿಯೇ ಎಚ್ಚರಿಸಿ ಪತ್ರ ಬರೆದಿದ್ದಾರೆ.
ಆಗ ಎಚ್ಚೆತ್ತುಕೊಂಡು ಇಲ್ಲಿನ `ಯು~ ತಿರುವನ್ನು ಶಾಶ್ವತವಾಗಿ ಮುಚ್ಚಿಸಿದ್ದರೆ ಕೆಲವರ ಪ್ರಾಣವಾದರೂ ಉಳಿಯುತ್ತಿತ್ತು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಆರ್‌ಎಫ್‌ಒ ವೆಂಕಟರಾಜು ಅವರ ದುರ್ಮರಣದ ನಂತರ ಇಲ್ಲಿನ ಶಾಸಕ ಕೆ.ರಾಜು ಅವರು ಸಹ ಇಲ್ಲಿನ `ಯು~ ತಿರುವು ಮುಚ್ಚುವಂತೆ ಒತ್ತಾಯಿಸಿ ಸಂಬಂಧಿಸಿದ ಅಧಿಕಾರಿಗೆ ಪತ್ರ ಬರೆದಿದ್ದಾರೆ.
ಇನ್ನೂ ಕೆಲವೆಡೆ ಅವೈಜ್ಞಾನಿಕ ತಿರುವುಗಳು:
ರಾಮನಗರದ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇನ್ನೂ ಹಲವು ಕಡೆಗಳಲ್ಲಿ ಹೆದ್ದಾರಿಯ ರಸ್ತೆ ವಿಭಜಕವನ್ನು ಅನಧಿಕೃತವಾಗಿ ಕಿತ್ತು ಹಾಕಿ ಅಲ್ಲಿ ಅವೈಜ್ಞಾನಿಕವಾಗಿ `ಯು~ ತಿರುವುಗಳನ್ನು ನಿರ್ಮಿಸಿಕೊಳ್ಳಲಾಗಿದೆ.
ರಾಜೀವ್‌ಗಾಂಧಿ ಪುರ ಗೇಟ್ ಬಳಿ, ಜಾನಪದ ಲೋಕದ ಮುಂಭಾಗ, ಕರಾವಳಿ ಡಾಬಾದ ಮುಂಭಾಗ, ಆರ್‌ಎಂಸಿ ಯಾರ್ಡ್ ಮುಂಭಾಗದಲ್ಲಿನ ರಸ್ತೆ ವಿಭಜಕವನ್ನು ಅನಧಿಕೃತವಾಗಿ ತೆರವು ಮಾಡಲಾಗಿದ್ದು, ಆ ಜಾಗಗಳನ್ನು ಮುಚ್ಚುವಂತೆ ಪೊಲೀಸರು 2012ರ ಮಾರ್ಚ್‌ನಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಪತ್ರ ಬರೆದು ತಿಳಿಸಿದ್ದಾರೆ.
ಅಲ್ಲದೆ ವುಡ್‌ಲ್ಯಾಂಡ್ ಹೋಟೆಲ್ ಮುಂಭಾಗ, ತಾಜ್ ಬಿರಿಯಾನಿ ಹೋಟೆಲ್ ಮುಂಭಾಗ, ಸೋನಾ ಬಾರ್ ಮುಂಭಾಗ, ಎಚ್‌ಡಿಎಫ್‌ಸಿ ಬ್ಯಾಂಕ್ ಮುಂಭಾಗ, ಅಕ್ಕುರು ರಾಮಕೃಷ್ಣಯ್ಯ ಬಿಲ್ಡಿಂಗ್ ಮುಂಭಾಗ, ಕಾಂಗ್ರೆಸ್ ಕಚೇರಿ ಮುಂಭಾಗ, ವಿವೇಕಾನಂದ ನಗರದ ಬಳಿ ಹೆದ್ದಾರಿ ಮತ್ತು ಸರ್ವೀಸ್ ರಸ್ತೆ ನಡುವೆ ಅಳವಡಿಸಲಾಗಿದ್ದ ಸಿಮೆಂಟ್ ದಿಂಡುಗಳನ್ನು ಕೆಲವರು ಸ್ಥಳಾಂತರಿಸಿದ್ದಾರೆ. ಇದೂ ಕೂಡ ಅಪಘಾತಕ್ಕೆ ಆಹ್ವಾನ ನೀಡುವಂತಿದ್ದು, ಅಲ್ಲಿ ಆದಷ್ಟು ಬೇಗ ದಿಂಡುಗಳನ್ನು ಜೋಡಿಸುವಂತೆ ಪೊಲೀಸರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಇವುಗಳ ಬಗ್ಗೆಯೂ ಇಲ್ಲಿಯವರೆಗೆ ಸಂಬಂಧಿಸಿದವರು ಕ್ರಮ ಜರುಗಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.