ADVERTISEMENT

ರಸ್ತೆಗಳ ತುಂಬ ಗುಂಡಿಗಳ ಸಾಮ್ರಾಜ್ಯ!

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2017, 8:35 IST
Last Updated 4 ಅಕ್ಟೋಬರ್ 2017, 8:35 IST
ರಾಮನಗರ ತಾಲ್ಲೂಕಿನ ಹೆಗ್ಗಡಗೆರೆ–ಕೆಂಪನಹಳ್ಳಿ ನಡುವಿನ ರಸ್ತೆಯ ದುಃಸ್ಥಿತಿ
ರಾಮನಗರ ತಾಲ್ಲೂಕಿನ ಹೆಗ್ಗಡಗೆರೆ–ಕೆಂಪನಹಳ್ಳಿ ನಡುವಿನ ರಸ್ತೆಯ ದುಃಸ್ಥಿತಿ   

ರಾಮನಗರ: ಈಚೆಗೆ ಸುರಿಯುತ್ತಿರುವ ಭಾರಿ ಮಳೆಯು ಜಿಲ್ಲೆಯ ರಸ್ತೆಗಳ ಮಾನ ಹರಾಜು ಮಾಡಿದೆ. ಎಲ್ಲೆಂದರೆ ಅಲ್ಲಿ ತಗ್ಗು ಗುಂಡಿ ಬಿದ್ದಿದ್ದು, ವಾಹನ ಸವಾರರು ಹೆದರಿಕೊಂಡೇ ಓಡಾಡುವಂತಾಗಿದೆ. ಗ್ರಾಮೀಣ ಭಾಗದಲ್ಲಿ ವಾಹನ ಸವಾರರ ಪಾಡು ಹೇಳದಂತೆ ಆಗಿದೆ. ಗಣಿ ಲಾರಿಗಳ ಅಬ್ಬರಕ್ಕೆ ಅದೆಷ್ಟೋ ಹಾದಿಗಳು ನಲುಗಿ ದೊಡ್ಡದಾಗಿ ಬಾಯಿ ತೆಗೆದುಕೊಂಡಿವೆ. ಈ ಗುಂಡಿಗಳಿಗೆ ಕಾಂಕ್ರೀಟು ಸುರಿದು ಅವುಗಳ ಬಾಯಿ ಮುಚ್ಚಿಸುವ ಕೆಲಸ ಮಾತ್ರ ಆಗಿಲ್ಲ.

ಹಳ್ಳಿ ರಸ್ತೆಗಳ ದುಃಸ್ಥಿತಿಯನ್ನು ಅರಿಯಬೇಕಾದರೆ ಒಮ್ಮೆ ಹೆಗ್ಗಡಗೆರೆ–ಕೆಂಪನಹಳ್ಳಿ ನಡುವಿನ ರಸ್ತೆಯಲ್ಲಿ ಸಂಚರಿಸಬೇಕು. ದ್ವಿಚಕ್ರವಾಹನಗಳು ಮುಳುಗುವಷ್ಟು ಅಗಲಕ್ಕೆ ಇವುಗಳು ಗುಂಡಿ ಬಿದ್ದಿವೆ. ಇಲ್ಲಿನ ಸುತ್ತ ನಾಲ್ಕಾರು ಕ್ರಷರ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಲಾರಿಗಳು ಟನ್‌ಗಟ್ಟಲೆ ತೂಕದ ಜಲ್ಲಿಕಲ್ಲು, ಪುಡಿಯನ್ನು ಹೇರಿಕೊಂಡು ಇದೇ ಹಾದಿಯಲ್ಲಿ ಓಡಾಡುತ್ತವೆ. ಅವುಗಳ ಪಕ್ಕಕ್ಕೆ ಬೈಕ್‌ ಇರಲಿ, ಕಾರುಗಳನ್ನು ಓಡಿಸಲು ಜನರು ಹೆದರುತ್ತಿದ್ದಾರೆ.

ಹೊಣೆಗಾರಿಕೆ ಮರೆತ ಗಣಿ ಮಾಲೀಕರು: ‘ದೊಡ್ಡ ಗುಡ್ಡಗಳನ್ನು ಬಗೆದು ಇಲ್ಲಿನ ಸಂಪತ್ತನ್ನು ಲೂಟಿ ಮಾಡುತ್ತಿರುವ ಗಣಿ ಮಾಲೀಕರು ತಮ್ಮ ವಾಹನಗಳಿಂದ ಹಾಳಾದ ರಸ್ತೆಗಳನ್ನು ದುರಸ್ತಿ ಮಾಡುವುದನ್ನು ಮರೆತಿದ್ದಾರೆ’ ಎಂದು ಹೆಗ್ಗಡಗೆರೆ ನಿವಾಸಿ ವೆಂಕಟೇಶ್‌ ಆರೋಪಿಸುತ್ತಾರೆ.

ADVERTISEMENT

‘ಎಲ್ಲ ಕಂಪೆನಿಗಳಿಗೂ, ಉದ್ಯಮಿಗಳಿಗೂ ಸಾಮಾಜಿಕ ಹೊಣೆಗಾರಿಕೆ ಎಂಬುದಿರುತ್ತದೆ. ತಮ್ಮ ಆದಾಯದ ಒಂದು ಪಾಲನ್ನು ಇಲ್ಲಿನ ಮೂಲ ಸೌಕರ್ಯಗಳ ಅಭಿವೃದ್ಧಿಗೆ ವಿನಿಯೋಗಿಸಬೇಕು ಎಂದು ನಿಯಮವೇ ಇದೆ. ಆದರೆ ಯಾವ ಕ್ರಷರ್‌ ಮಾಲೀಕರೂ ಸಾರ್ವಜನಿಕ ರಸ್ತೆಗಳ ಅಭಿವೃದ್ಧಿಗೆ ಮುಂದಾಗಿಲ್ಲ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ನಗರದ್ದೂ ಇದೇ ಕಥೆ: ಪಟ್ಟಣ ಪ್ರದೇಶಗಳ ರಸ್ತೆಗಳೇನು ಉತ್ತಮ ಸ್ಥಿತಿಯಲ್ಲಿವೆ ಎಂದು ಬೀಗುವ ಹಾಗಿಲ್ಲ. ಇಲ್ಲಿನವುಗಳದ್ದೂ ಅದೇ ಕಥೆ. ಸಾಕಷ್ಟು ರಸ್ತೆಗಳಲ್ಲಿ ಹೊಂಡಗಳು ಬಾಯಿ ತೆರೆದುಕೊಂಡಿವೆ. ವಾಹನ ಸವಾರರ ಬಲಿಯಾಗಿ ಕಾಯತೊಡಗಿವೆ.

ಐಜೂರು ವೃತ್ತದ ಮಗ್ಗಲಿನಲ್ಲೇ ಇರುವ ಸರ್ವೀಸ್‌ ರಸ್ತೆ ಹಾಳಾಗಿ ವರ್ಷಗಳೇ ಕಳೆದಿದೆ. ಬಸ್ಸುಗಳು ಇದೇ ರಸ್ತೆಯಲ್ಲಿನ ಹೊಂಡಗಳನ್ನು ನಿತ್ಯ ಹತ್ತಿ–ಇಳಿಯುತ್ತಾ ಇನ್ನಷ್ಟು ಹಾಳು ಮಾಡುತ್ತಿವೆ. ಸಾರ್ವಜನಿಕರು ಇಲ್ಲಿನ ಗುಂಡಿಯೊಳಗೆ ಬಾಗೀನ ಬಿಟ್ಟು ಜನಪ್ರತಿನಿಧಿಗಳ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಎನ್‌ಎಚ್‌ಎಐ ನಿರ್ಲಕ್ಷ್ಯ: ಬೆಂಗಳೂರು–ಮೈಸೂರು ನಡುವಿನ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಉದ್ದಕ್ಕೂ ಸಾಕಷ್ಟು ಗುಂಡಿಗಳು ಕಾಣತೊಡಗಿವೆ. ಆದರೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಮಾತ್ರ ಜಾಣಕುರುಡು ಪ್ರದರ್ಶಿಸುತ್ತಿದೆ ಎನ್ನುವುದು ಸ್ಥಳೀಯರ ಆರೋಪವಾಗಿದೆ.

‘ಹೊರವರ್ತುಲ ರಸ್ತೆ ನಿರ್ಮಾಣವಾದ ಬಳಿಕ ನಗರದ ಒಳಗಿನ ರಸ್ತೆಗಳು ಸ್ಥಳೀಯ ರಸ್ತೆಗಳಾಗಿ ಪರಿವರ್ತನೆ ಆಗಲಿವೆ. ಇದನ್ನೇ ನೆಪ ಮಾಡಿಕೊಂಡು ಅಧಿಕಾರಿಗಳು ಗುಂಡಿಗೆ ತೇಪೆ ಹಚ್ಚಿ ಕೈತೊಳೆದುಕೊಳ್ಳುತ್ತಿದ್ದಾರೆ. ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ’ ಎಂದು ಜನರು ಆರೋಪಿಸುತ್ತಾರೆ.

‘ನಗರ ಹಾಗೂ ಗ್ರಾಮೀಣ ರಸ್ತೆಗಳ ಡಾಂಬರೀಕರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಗಮನ ನೀಡಬೇಕು. ಸರ್ಕಾರದಿಂದ ವಿಶೇಷ ಪ್ಯಾಕೇಜ್‌ ಪಡೆದು ರಸ್ತೆಗಳನ್ನು ಅಭಿವೃದ್ಧಿ ಮಾಡಬೇಕು’ ಎನ್ನುವುದು ಇಲ್ಲಿನ ನಾಗರಿಕರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.