ADVERTISEMENT

‘ರೈತರು ಸ್ವಾಭಿಮಾನಿಗಳಾಗಲು ಸಂಘ ಕಾರಣ’

ಕನಕಪುರ: ರೈತ ಜಾಗೃತಿ ಸಭೆಯಲ್ಲಿ ಸಂಘಕ್ಕೆ ಕೆಲವರ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2018, 11:33 IST
Last Updated 20 ಮಾರ್ಚ್ 2018, 11:33 IST

ಕನಕಪುರ: ರೈತರು ಸ್ವಾಭಿಮಾನಿಗಳಾಗಿ ತಲೆ ಎತ್ತಿಕೊಂಡು ಓಡಾಡುವ ಆತ್ಮಸ್ಥೈರ್ಯ ಮೂಡಲು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರಣ ಎಂದು ರೈತ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಕೆ.ಮಲ್ಲಯ್ಯ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಯಡಮಾರನಹಳ್ಳಿ ಗ್ರಾಮದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ರೈತ ಜಾಗೃತಿ ಸಭೆ ಮತ್ತು ಗ್ರಾಮ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ 80ರ ದಶಕದಿಂದಲೂ ರೈತ ಸಂಘ ಸಂಘಟನೆಯಲ್ಲಿ ತೊಡಗಿದ್ದು, ಆತ್ಮಗೌರವಕ್ಕೆ ಧಕ್ಕೆ ಬಾರದಂತೆ ರೈತರನ್ನು ಕಾಲ ಕಾಲಕ್ಕೆ ಜಾಗೃತಿಗೊಳಿಸುವ ಮೂಲಕ ಆಶೋತ್ತರಗಳಿಗೆ ಸ್ಪಂದಿಸುತ್ತಿದೆ ಎಂದು ಅವರು ಹೇಳಿದರು.

ADVERTISEMENT

ರೈತ ದೇಶದ ಬೆನ್ನೆಲುಬು ಎನ್ನುವ ರಾಜಕಾರಣಿಗಳಾಗಲಿ, ಸರ್ಕಾರಕ್ಕಾಗಲಿ ರೈತರ ಬಗ್ಗೆ ನಿಜವಾದ ಕಾಳಜಿ ಇಲ್ಲ. ಚುನಾವಣೆ ಸಮಯದಲ್ಲಿ ರೈತರ ಬಗ್ಗೆ ಅನುಕಂಪ ತೋರಿಸಿ ಭರವಸೆಗಳ ಮಹಾಪೂರವನ್ನೇ ಹರಿಸುತ್ತಾರೆ. ಸರ್ಕಾರಿ ಅಧಿಕಾರಿಗಳು ವೇದಿಕೆ ಮೇಲೆ ಸರ್ಕಾರದ ದಾಖಲೆಗಳ ಮೇಲೆ ರೈತರ ಪರವಾಗಿದ್ದೇವೆ ಎನ್ನುತ್ತಾರೆ. ಅವರ ಬಳಿ ಹೋದರೆ ಹಣವಿಲ್ಲದೆ ಯಾವುದೇ ಕೆಲಸ ಮಾಡುವುದಿಲ್ಲ ಎಂದು ಟೀಕಿಸಿದರು.

ಜಿಲ್ಲಾ ಕಾರ್ಯಾಧ್ಯಕ್ಷ ಚೀಲೂರು ಮುನಿರಾಜು ಮಾತನಾಡಿ, ತಲೆಮಾರುಗಳಿಂದ ದುಡಿಯುತ್ತಿರುವ ರೈತರು ದುಡಿಯುತ್ತಲೇ ಇದ್ದಾರೆ. ಅವರ ಆರ್ಥಿಕ ಸ್ಥಿತಿಗತಿಗಳಲ್ಲಿ ಏನೂ ಬದಲಾವಣೆ ಇಲ್ಲ. ರಾಜಕೀಯ ಪ್ರವೇಶಿಸಿದ ರಾಜಕಾರಣಿಗಳು ಒಂದೆರೆಡು ವರ್ಷಗಳಲ್ಲೇ ಸ್ಥಿತಿಗತಿ ಸುಧಾರಿಸಿ ಶ್ರೀಮಂತರಾಗಿ ಬಿಡುತ್ತಾರೆ. ಬಡವರು ಮತ್ತು ರೈತರ ರಕ್ತವನ್ನು ಹೀರುವ ರಾಜಕಾರಣಿಗಳು ಮತ್ತು ಅಧಿಕಾರಿಗಳನ್ನು ಮಟ್ಟ ಹಾಕಬೇಕು. ರೈತ ಸಂಘಟನೆ ಸೇರಿಕೊಳ್ಳುವ ಮೂಲಕ ಸಂಘ ಬಲಿಷ್ಠಗೊಳಿಸಬೇಕು. ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡಬೇಕೆಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.