ADVERTISEMENT

ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಲೆಕ್ಕಿಗ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2011, 19:30 IST
Last Updated 12 ಏಪ್ರಿಲ್ 2011, 19:30 IST

ರಾಮನಗರ: ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ಒಂದು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಮಾಗಡಿ ತಾಲ್ಲೂಕಿನ ನೇರಳೆಕೆರೆ ಪಂಚಾಯಿತಿಯ ಗ್ರಾಮ ಲೆಕ್ಕಿಗ ಹನುಮಲಕ್ಕಪ್ಪ ಅವರು ಮಂಗಳವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ನೇರಳೆಕೆರೆಯ ಯತೀಶ್ ಎಂಬುವರು ನೀಡಿದ್ದ ದೂರಿನ ಆಧಾರದ ಮೇಲೆ ಜಿಲ್ಲಾ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎ.ಎನ್.ಸ್ವಾಮಿ ಅವರ ನೇತೃತ್ವದ ತಂಡ ಈ ದಾಳಿ ನಡೆಸಿ ಹನುಮಲಕ್ಕಪ್ಪ ಅವರನ್ನು ಲಂಚ ಹಣದ ಸಮೇತ ವಶಕ್ಕೆ ತೆಗೆದುಕೊಂಡಿದ್ದಾರೆ.
 

ಗಂಗಾಧರಗೌಡ ಅವರ ಹೆಸರಿನಿಂದ ಅವರ ಮಗನಾದ ಯತೀಶ್ ಎಂಬುವರ ಹೆಸರಿಗೆ ಜಮೀನಿನ ಖಾತಾ ಬದಲಾವಣೆಗೆ ಸಂಬಂಧಿಸಿದಂತೆ ಗ್ರಾಮ ಲೆಕ್ಕಿಗ ಲಂಚ ನೀಡುವಂತೆ ಬೇಡಿಕೆ ಒಡ್ಡಿದ್ದ. ಈ ವಿಷಯ ಕುರಿತು ಲೋಕಾಯುಕ್ತಕ್ಕೆ ದೂರು ನೀಡಿದ ಯತೀಶ್ ಅವರು ಲೋಕಾಯುಕ್ತರ ಸೂಚನೆ ಮೇರೆಗೆ ಗ್ರಾಮ ಲೆಕ್ಕಿಗನಿಗೆ ಸಾವಿರ ರೂಪಾಯಿ ಲಂಚವನ್ನು ಮಾಗಡಿಯ ಗುರುದರ್ಶಿನಿ ಹೋಟೆಲ್‌ನಲ್ಲಿ  ನೀಡಿದರು.
 

ಲಂಚ ಸ್ವೀಕರಿಸಿ ಹಣವನ್ನು ಕಿಸೆಯಲ್ಲಿಟ್ಟುಕೊಳ್ಳುವಷ್ಟರಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಗ್ರಾಮ ಲೆಕ್ಕಿಗನ್ನು ಬಂಧಿಸಿದರು. ಈ ದಾಳಿಯಲ್ಲಿ ಲೋಕಾಯುಕ್ತ ಡಿಎಸ್‌ಪಿ ಎಸ್. ಮಂಜಪ್ಪ, ಐ.ಒ.ಸಣ್ಣ ತಮ್ಮಯ್ಯ ಒಡೆಯರ್ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.