ADVERTISEMENT

ವರದಕ್ಷಿಣೆ ಕಿರುಕುಳ: ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2012, 19:30 IST
Last Updated 5 ಏಪ್ರಿಲ್ 2012, 19:30 IST

ರಾಮನಗರ: ಕನಕಪುರ ತ್ಲ್ಲಾಲೂಕಿನ ಬಿ.ಎಸ್.ದೊಡ್ಡಿ ಗ್ರಾಮದ ಹೊನ್ನೇಗೌಡರ ಮಗ ಜಗದೀಶ್ ಎಂಬುವರ ಮೇಲೆ ಅವರ ಪತ್ನಿ ಡಿ.ಸುಧಾ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಬುಧವಾರ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ.

`2011ರ ನವೆಂಬರ್ 13ರಂದು ಜಗದೀಶ್ ಮತ್ತು ನನ್ನ ವಿವಾಹ ದೊಡ್ಡಾಲಹಳ್ಳಿಯಲ್ಲಿನ ಎಸ್.ಎಂ. ಕೃಷ್ಣ ಸಮುದಾಯ ಭವನದಲ್ಲಿ ನಡೆದಿದೆ. 2 ತಿಂಗಳು ಪತಿ ಜತೆ ಅನ್ಯೋನ್ಯವಾಗಿದ್ದೆ. ಆ ನಂತರ ತಂದೆ ಮನೆಯಿಂದ ವರದಕ್ಷಿಣೆ ತರುವಂತೆ ಜಗದೀಶ್ ನನ್ನ ಮೇಲೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ~ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
 
ಎರಡು ತಿಂಗಳಾದರೂ ಮನೆಗೆ ಬಾರದ ಪತಿಗೆ ಫೋನ್ ಮಾಡಿ ಕೇಳಿದ್ದಕ್ಕೆ, ಆತ ಐದು ಲಕ್ಷ ರೂಪಾಯಿ ಹಣ ತೆಗೆದು ಕೊಂಡು ಬಾ ಎಂದು ಹೇಳಿದ್ದಾರೆ. ಹಾಗಾಗಿ ಪತಿ ವಿರುದ್ಧ ಕ್ರಮ ಜರುಗಿಸುವಂತೆ ಸುಧಾ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವಂಚನೆ: ಮಾಗಡಿ ತಾಲ್ಲೂಕಿನ ಕುದೂರು ಗ್ರಾಮದಲ್ಲಿ ಸ್ಥಾಪಿಸಲಾಗಿರುವ ಕುಡಿಯುವ ನೀರಿನ ಶುದ್ಧೀಕರಣ ಘಟಕದಲ್ಲಿ ಉಸ್ತುವಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಟಿ.ಜಿ.ವೇಣು ಎಂಬಾತ ಘಟಕದ 30,700 ರೂಪಾಯಿ ದುರುಪಯೋಗ ಪಡಿಸಿಕೊಂಡಿದ್ದಾನೆಂದು ಘಟಕದ ನಿರ್ಮಾಪಕ ಕಂಪೆನಿಯ ಪ್ರತಿನಿಧಿ ಅನಂತ್ ಕುದೂರು ಪೊಲೀಸ್‌ಠಾಣೆಯಲ್ಲಿ ಬುಧವಾರ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.