ADVERTISEMENT

ವರದಕ್ಷಿಣೆ ನಿರ್ಮೂಲನೆಗೆ ಮುಂದಾಗಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2012, 19:30 IST
Last Updated 12 ಮಾರ್ಚ್ 2012, 19:30 IST

ಚನ್ನಪಟ್ಟಣ: ವರದಕ್ಷಿಣೆ ಪಿಡುಗನ್ನು ನಿರ್ಮೂಲನೆ ಮಾಡಲು ಯುವ ಸಮೂಹ ಒಗ್ಗಟ್ಟಿನಿಂದ ಹೋರಾಡಬೇಕಿದೆ ಎಂದು ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಎನ್.ರುದ್ರಮುನಿ ಕರೆ ನೀಡಿದರು.

ಪಟ್ಟಣದ ಕೇಂಬ್ರಿಡ್ಜ್  ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ ಹಾಗೂ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

 ವರದಕ್ಷಿಣೆ ಪ್ರಕರಣಗಳು ಹೆಚ್ಚುತ್ತಿದ್ದು, ಇದನ್ನು ತಡೆಯಲು ವಿದ್ಯಾರ್ಥಿಗಳಿಗೆ ಬಾಲ್ಯದಿಂದಲೇ ಜಾಗೃತಿ ಅವಶ್ಯ. ಈ ಬಗ್ಗೆ ಅರಿವು ಮೂಡಿಸುವ ಅವಶ್ಯಕತೆಯಿದೆ ಎಂದರು. ವರದಕ್ಷಿಣೆ ಜೊತೆಗೆ ಪ್ರೇಮ ಪ್ರಕರಣಗಳು ಸಹ ಹೆಚ್ಚುತ್ತಿದ್ದು, ಇದರಿಂದ ಪೋಷಕರು ಹಾಗೂ ಮಕ್ಕಳ ನಡುವಿನ ಸಂಬಂಧಕ್ಕೆ ಧಕ್ಕೆ ಎದುರಾಗುತ್ತಿದೆ ಎಂದು ವಿಷಾದಿಸಿದರು.

ಸಾಹಿತಿ ಅರ್ಜುನಪುರಿ ಅಪ್ಪಾಜಿಗೌಡ, ಬಡತನ ಹೆಚ್ಚಾಗಲು ಅನಕ್ಷರತೆಯೇ ಕಾರಣ. ಸಾಕ್ಷರತೆ ಹೆಚ್ಚಾದರೆ ಪ್ರತಿ ವಿಷಯದಲ್ಲೂ ಜ್ಞಾನ ಬೆಳೆದು ಬಡತನ ತೊಲಗಿಸಬಹುದು. ಗ್ರಾಮೀಣ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಶಾಲೆಯಿಂದ ಹೊರಗುಳಿದಿರುವ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕಾದ್ದು ಶಿಕ್ಷಕರ, ಪೋಷಕರ ಜವಾಬ್ದಾರಿ ಎಂದರು. ವಿದ್ಯಾಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ಎಸ್.ಲಿಂಗೇಶ್‌ಕುಮಾರ್, ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶರಾದ ವಿ. ಪುಷ್ಪವತಿ ಮಾತನಾಡಿದರು.

ಈ ವೇಳೆ ಎಸ್‌ಎಸ್‌ಎಲ್‌ಸಿ. ಹಾಗೂ ಪಿಯುಸಿ.ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು. ನ್ಯಾಯಾಧೀಶ ನಾರಾಯಣ ಪ್ರಸಾದ್, ವಿದ್ಯಾಸಂಸ್ಥೆ  ನಿರ್ದೇಶಕರಾದ ಚಿತ್ರಾ ಲಿಂಗೇಶ್‌ಕುಮಾರ್, ಜೆ.ಡಿ.ಎಸ್. ಮುಖಂಡ ಜಿ.ಕೃಷ್ಣೇಗೌಡ, ಪ್ರಾಂಶುಪಾಲ ನಿಂಗೇಗೌಡ, ಮುಖ್ಯ ಶಿಕ್ಷಕಿ ರೇಣುಕಾದೇವಿ ಇತರರು ಹಾಜರಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.